ಎಲ್‌ಟಿಟಿಇಯ ಇಬ್ಬರು ಪ್ರಮುಖ ನಾಯಕರಾದ ದಯಾ ಮಾಸ್ಟರ್ ಮತ್ತು ಜಾರ್ಜ್ ಶ್ರೀಲಂಕಾ ಸೇನೆಗೆ ಶರಣಾಗುವ ಮೂಲಕ ದ್ವೀಪರಾಷ್ಟ್ರದಲ್ಲಿ ಎಲ್‌ಟಿಟಿಇ ಹೋರಾಟ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ದಯಾ ಎಲ್‌ಟಿಟಿಇಯ ಮಾಧ್ಯಮ ಉಸ್ತುವಾರಿ ವಹಿಸಿದ್ದ ಮತ್ತು ಜಾರ್ಜ್ ಸಂಘಟನೆಯ ಅಧಿಕೃತ ವ್ಯಾಖ್ಯಾನಕಾರನಾಗಿದ್ದನು.
ಈಶಾನ್ಯ ಭಾಗದಲ್ಲಿರುವ ಸೇನೆಗೆ ಅವರಿಬ್ಬರು ಶರಣಾಗಿದ್ದಾರೆ. ಪ್ರಭಾಕರನ್‌ಗೆ ನೀಡಿದ್ದ ಗಡುವು ಮುಗಿದಿದ್ದರಿಂದ ಶ್ರೀಲಂಕಾ ಸೇನೆ ಅಂತಿಮ ದಾಳಿ ನಡೆಸಿದ್ದು, ಇನ್ನಷ್ಟು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ. ಶ್ರೀಲಂಕಾದ ಪಡೆಗಳು ಎಲ್‌ಟಿಟಿಇ ಉನ್ನತ ನಾಯಕರು ಅಡಗಿರುವರೆಂದು ಶಂಕಿಸಲಾದ ಗುಂಡು ಹಾರಾಟ ನಿಷೇಧ ಪ್ರದೇಶದ ಪೂರ್ವ ತೀರಕ್ಕೆ ನುಗ್ಗಿವೆ. ವ್ಯಾಘ್ರಪಡೆಯ ಕೈವಶದಲ್ಲಿದ್ದ ಸಣ್ಣ 17ಕಿಮೀ ಪ್ರದೇಶವನ್ನು ಶ್ರೀಲಂಕಾ ಪಡೆಗಳು ಅಕ್ಷರಶಃಇಬ್ಭಾಗವಾಗಿಸಿದೆ.
ಎಲ್‌ಟಿಟಿಇ ಶರಣಾಗಬೇಕೆಂಬ ಸರ್ಕಾರ ಪ್ರಸ್ತಾಪ ಇನ್ನೂ ಚಾಲ್ತಿಯಲ್ಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ತಿಳಿಸಿದರು. ಎಲ್ಲ ನಾಗರಿಕರನ್ನು ಗುಂಡು ಹಾರಾಟ ನಿಷೇಧ ಪ್ರದೇಶದಿಂದ ಪಾರು ಮಾಡಿದ ಬಳಿಕ ಪ್ರಭಾಕರನ್ ಹಾಗೂ ಸಂಗಡಿಗರು ಶಸ್ತ್ರಾಸ್ತ್ರ ಒಪ್ಪಿಸುವ ಸಾಧ್ಯತೆಯಿದೆಯೆಂದು ಅವರು ತಿಳಿಸಿದ್ದಾರೆ.ಸೇನೆಯ ದಾಳಿಯಿಂದ 1000 ನಾಗರಿಕರು ಸತ್ತಿದ್ದಾರೆಂದು ಶ್ರೀಲಂಕಾ ಬಂಡುಕೋರರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಮಿಲಿಟರಿ ಅಲ್ಲಗಳೆದಿದೆ. ಸುಮಾರು 52,000 ನಾಗರಿಕರು ತಪ್ಪಿಸಿಕೊಂಡಿದ್ದಾರೆಂದು ಮಿಲಿಟರಿ ಮಂಗಳವಾರ ಸಂಜೆ ತಿಳಿಸಿದೆ. ಸಾವಿರಾರು ನಾಗರಿಕರು ಸಣ್ಣ ದೋಣಿಗಳಲ್ಲಿ ತುಂಬಿಕೊಂಡು ಮಿಲಿಟರಿ ಬಂಡುಕೋರರನ್ನು ದೂಡಿದ ಸಣ್ಣ ಭೂಪ್ರದೇಶದಿಂದ ತಪ್ಪಿಸಿಕೊಂಡಿದ್ದಾರೆ. ನೌಕಾದೋಣಿಗಳು ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ತಮ್ಮ ದೋಣಿಗಳಿಗೆ ತುಂಬಿ ಶಿಬಿರಗಳಿಗೆ ಸಾಗಿಸಿದ್ದಾರೆ. |