ಶ್ರೀಲಂಕಾದಲ್ಲಿ ಸರ್ಕಾರ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ತಮಿಳು ನಾಗರಿಕರ ಸಂಕಷ್ಟ ವಿರೋಧಿಸಿ ಪ್ಯಾರಿಸ್‌ನಲ್ಲಿರುವ ಶ್ರೀಲಂಕಾ ತಮಿಳರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸುಮಾರು 160 ತಮಿಳರನ್ನು ಬಂಧಿಸಲಾಗಿದೆ.
ಈಫಲ್ ಗೋಪುರದ ಎದುರು ಮಾನವ ಹಕ್ಕುಗಳ ಚೌಕದಲ್ಲಿ 300 ಜನರಿದ್ದ ಇನ್ನೊಂದು ತಂಡವು 24 ಗಂಟೆಗಳ ಧರಣಿ ಕುಳಿತಿದೆ. ಫ್ರೆಂಚ್ ತ್ರಿವರ್ಣ ಧ್ವಜದ ಜತೆಗೆ ಕೆಂಪು ತಮಿಳು ಈಳಂ ಧ್ವಜವನ್ನು ಹಾರಿಸಲಾಗಿದ್ದು, ಭಾರತೀಯ ರಾಜಕಾರಣಿಗಳನ್ನು ರಾಕ್ಷಸರೆಂದು ಬಿಂಬಿಸುವ ಭಿತ್ತಿಚಿತ್ರಗಳನ್ನು ತಮಿಳರು ಹಿಡಿದಿದ್ದರು.
ಫ್ರಾನ್ಸ್‌ನ ತಮಿಳರ ಸಮನ್ವಯ ಸಮಿತಿಯ ಸದಸ್ಯ ತಿರುಚ್ಚೋಟಿ ತಿರು ಅವರ ಇಬ್ಬರು ಸೋದರರು ಮತ್ತು 8 ಮಕ್ಕಳು ವಾನ್ನಿಯಲ್ಲಿ ಇದ್ದಾರೆ. 'ತಾವು ಜಾಫ್ನಾದಲ್ಲಿರುವ ತಾಯಿ ಜತೆ ಮಾತನಾಡಿದಾಗ ಅವರ ಧ್ವನಿ ಉಡುಗಿದ್ದಾಗಿ ಅವರು ಹೇಳಿದ್ದಾರೆ. ಕೊಲಂಬೊದಲ್ಲಿರುವ ಬಂಧುಗಳು ಕೂಡ ತಮ್ಮ ಧ್ವನಿ ಉಡುಗಿಹೋಗಿದೆಯೆಂದು ತಿಳಿಸಿದ್ದಾರೆ.
ಆದ್ದರಿಂದ ಧ್ವನಿರಹಿತರಿಗೆ ಧ್ವನಿಯಾಗಿರಲು ನಾವು ಬಯಸಿದ್ದೇವೆಂದು' ತಿರುಚ್ಚೋಟಿ ಹೇಳಿದರು. ತಮ್ಮ ಸೋದರ ಮತ್ತು ತಾಯಿಯನ್ನು ಸಂಪರ್ಕಿಸಲು ಅಸಾಧ್ಯವಾದ 27 ವರ್ಷ ವಯಸ್ಸಿನ ಆಲ್ಫ್ರೆಡ್, ಕಳೆದ 14 ದಿನಗಳಿಂದ ಉಪವಾಸ ನಿರಶನ ನಡೆಸಿದ್ದಾನೆ. ಸುಮಾರು 20 ಲಕ್ಷ ಶ್ರೀಲಂಕಾ ತಮಿಳರು ಶ್ರೀಲಂಕಾದ ಹೊರಗೆ ವಾಸಿಸುತ್ತಿದ್ದು ಅನೇಕ ವರ್ಷಗಳಿಂದ ಎಲ್‌ಟಿಟಿಇಗೆ ಬೆಂಬಲದ ತಳಹದಿಯಾಗಿದ್ದಾರೆ. ಶ್ರೀಲಂಕಾದ ತಮಿಳರ ಸಂಕಷ್ಟ ನಿವಾರಣೆಗೆ ಅಂತಾರಾಷ್ಟ್ರೀಯ ಗಮನ ಸೆಳೆಯುವುದಕ್ಕಾಗಿ ಅವರು ಕಟ್ಟ ಕಡೆಯ ಹಂತವಾಗಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. |