ದಕ್ಷಿಣ ಕೊರಿಯದ ವ್ಯಕ್ತಿಯೊಬ್ಬನಿಗೆ 10 ಜನರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 2006 ಮತ್ತು 2008ರ ನಡುವೆ 8 ಮಹಿಳೆಯರನ್ನು ಅಪಹರಿಸಿದ ಮತ್ತು ಹತ್ಯೆ ಮಾಡಿದ ಆರೋಪವನ್ನು ಕಾಂಗ್ ಹೊ ಸನ್ ವಿರುದ್ಧ ಹೊರಿಸಲಾಗಿದೆ.
ಇದರ ಜತೆಗೆ 2005ರಲ್ಲಿ ತನ್ನ ಪತ್ನಿ ಮತ್ತು ಅತ್ತೆಯನ್ನು ಜೀವಂತ ದಹಿಸಿದ ಆರೋಪವನ್ನು ಅವನ ವಿರುದ್ಧ ಹೊರಿಸಲಾಗಿತ್ತು.38ವರ್ಷ ಪ್ರಾಯದ ಕಾಂಗ್‌ನನ್ನು ಕಾಲೇಜಿನ ಯುವತಿಯನ್ನು ಹತ್ಯೆ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ಜನವರಿಯಲ್ಲಿ ಬಂಧಿಸಿದಾಗ ಇನ್ನೂ 7 ಮಂದಿ ಮಹಿಳೆಯರನ್ನು ಕೊಂದು ರಹಸ್ಯವಾಗಿ ಹೂತುಹಾಕಿದ ಪ್ರಕರಣ ಬೆಳಕಿಗೆ ಬಂತು.
ದಕ್ಷಿಣ ಕೊರಿಯದಲ್ಲಿ ಮರಣದಂಡನೆ ಶಿಕ್ಷೆ ಜಾರಿಯಲ್ಲಿದೆ. ಆದರೆ ಒಂದು ದಶಕಗಳವರೆಗೆ ಯಾವುದೇ ಮರಣದಂಡನೆಯನ್ನು ಜಾರಿ ಮಾಡಿರಲಿಲ್ಲ. ಕಾಂಗ್ ವಿಮಾ ಹಣದ ಮೇಲಿನ ಆಸೆಯಿಂದ ಸಿಯೋಲ್‌ನಲ್ಲಿದ್ದ ತನ್ನ ಮನೆಗೆ ಬೆಂಕಿ ಹಚ್ಚಿದ್ದರಿಂದ ಪತ್ನಿ ಮತ್ತು ಅತ್ತೆ ಸುಟ್ಟುಭಸ್ಮವಾಗಿದ್ದಾರೆಂದು ಆರೋಪಿಸಲಾಗಿದೆ.
ಈ ಆರೋಪವನ್ನು ಅಲ್ಲಗಳೆದಿರುವ ಕಾಂಗ್ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ತಾನು ಅದೃಷ್ಟವಶಾತ್ ಪಾರಾಗಿದ್ದಾಗಿ ಹೇಳಿದ್ದಾನೆ. ಆದಾಗ್ಯೂ, ಅನ್ಸಾನ್ ಕೋರ್ಟ್ ಕಾಂಗ್ ಎಲ್ಲ ಆರೋಪಗಳಲ್ಲಿ ತಪ್ಪಿತಸ್ಥನೆಂದು ತೀರ್ಪುನೀಡಿತು. ಆರೋಪಿಯ ವಿರುದ್ಧ ಅತ್ಯಾಸೆ ಮತ್ತು ಲೈಂಗಿಕ ತೃಷೆ ತೀರಿಸಿಕೊಳ್ಳಲು ಅಮಾಯಕ ಜನರನ್ನು ಹತ್ಯೆ ಮಾಡಿದ್ದಾನೆಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. |