ಶ್ರೀಲಂಕಾದಲ್ಲಿ ಸೇನೆಯ ಜತೆಯ ಹೋರಾಟದಲ್ಲಿ ಸೋಲಿನ ಅಂಚಿನಲ್ಲಿರುವ ತಮಿಳು ವ್ಯಾಘ್ರಗಳಿಗೆ ತಕ್ಷಣವೇ ಶರಣಾಗುವಂತೆ ಮತ್ತು ಭಯೋತ್ಪಾದನೆಯನ್ನು ತ್ಯಜಿಸಿ ಮಾತುಕತೆ ಮೂಲಕ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ದಶಕಗಳ ಕಾಲದ ಜನಾಂಗೀಯ ಸಂಘರ್ಷಕ್ಕೆ ತೆರೆಎಳೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೂಚಿಸಿದೆ.
ಫ್ರಾನ್ಸ್ ಮನವಿ ಮೇಲೆ ಕರೆದಿದ್ದ ಸಭೆಯಲ್ಲಿ ಮೆಕ್ಸಿಕೊ ರಾಯಭಾರಿ ಕೂಡ ಆಗಿರುವ ಯುಎನ್‌ಎಸ್‌ಸಿ ಅಧ್ಯಕ್ಷ ಕ್ಲಾಡೇ ಹೆಲ್ಲರ್ ಈ ವಿಷಯ ತಿಳಿಸಿದ್ದಾರೆ. ಸಂಘರ್ಷ ವಲಯದಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳ ಕಳವಳ ಮತ್ತು ರಕ್ತಪಾತದ ಸಾಧ್ಯತೆ ತಪ್ಪಿಸುವ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರಸಕ್ತ ಪರಿಸ್ಥಿತಿ ಕುರಿತು 15 ಸದಸ್ಯಬಲದ ಸಭೆಯಲ್ಲಿ ಚರ್ಚಿಸಲಾಯಿತು.
ವಾನ್ನಿ ಪ್ರದೇಶದಲ್ಲಿ ಮಾನವೀಯ ಪರಿಸ್ಥಿತಿ ಮತ್ತು ಸಂಘರ್ಷ ವಲಯದಲ್ಲಿ ಸಿಕ್ಕಿಬಿದ್ದ ನಾಗರಿಕರ ಸಂಕಷ್ಟಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಹೆಲ್ಲರ್, ಎಲ್ಲ ಸದಸ್ಯ ರಾಷ್ಟ್ರಗಳಿಗೆ ತುರ್ತು ಮಾನವೀಯ ನೆರವು ನೀಡಬೇಕೆಂದು ಆಗ್ರಹಿಸಿದರು.
|