ಇರಾನ್ ತನ್ನ ಪರಮಾಣು ಕಾರ್ಯಕ್ರಮ ಕುರಿತು ಮಾತುಕತೆ ನಿರಾಕರಿಸಿದರೆ ಕಠಿಣ ದಿಗ್ಬಂಧನಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಎಚ್ಚರಿಸಿದ್ದಾರೆ. ಇರಾನ್
ಮಾತುಕತೆ ನಿರಾಕರಿಸಿದರೆ ಅಥವಾ ಮಾತುಕತೆ ಪ್ರಕ್ರಿಯೆ ನಿಂತರೆ ಇಂತಹ ಕ್ರಮಗಳಿಗೆ ಅಮೆರಿಕ ಅಡಿಪಾಯ ಹಾಕುತ್ತಿರುವುದಾಗಿ ಹಿಲರಿ ಕ್ಲಿಂಟನ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ತಿಳಿಸಿದೆ.ಪರಮಾಣು ಕಾರ್ಯಕ್ರಮವು ಶಾಂತಿಯುತ ಉದ್ದೇಶಗಳಿಗೆಂದು ಇರಾನ್ ಹೇಳುತ್ತಿದೆ. ಆದರೆ ಅಣ್ವಸ್ತ್ರ ತಯಾರಿಕೆ ಉದ್ದೇಶವನ್ನು ಇರಾನ್ ಹೊಂದಿರುವುದಾಗಿ ಟೀಕಾಕಾರರು ಹೇಳಿದ್ದಾರೆ.
ಟೆಹರಾನ್ ಬುಧವಾರ ನೀಡಿದ ಹೇಳಿಕೆಯಲ್ಲಿ ವಿಶ್ವಶಕ್ತಿಗಳ ಜತೆ ರಚನಾತ್ಮಕ ಮಾತುಕತೆಗೆ ಸಿದ್ಧವಿದ್ದರೂ, ತನ್ನ ಪರಮಾಣು ಚಟುವಟಿಕೆ ಮುಂದುವರಿಸುವುದಾಗಿ ಅದು ತಿಳಿಸಿದೆ. ಕಳೆದ ವಾರ ಅಧ್ಯಕ್ಷ ಅಹ್ಮದಿ ನೆಜಾದ್ ಚರ್ಚೆಗೆ ಹೊಸ ಪ್ಯಾಕೇಜ್ ಮಂಡಿಸುವುದಾಗಿ ಹೇಳಿದ್ದು, ಆ ಬಗ್ಗೆ ಇನ್ನೂ ವಿವರಗಳನ್ನು ನೀಡಬೇಕಾಗಿದೆ.
ಈ ತಿಂಗಳಾರಂಭದಲ್ಲಿ ಇರಾನ್ ಪರಮಾಣು ಮಹತ್ವಾಕಾಂಕ್ಷೆಯ ಬಗ್ಗೆ ನೀತಿ ರೂಪಿಸುತ್ತಿರುವ 6 ರಾಷ್ಟ್ರಗಳು ರಾಜತಾಂತ್ರಿಕ ಪರಿಹಾರಕ್ಕಾಗಿ ಹೊಸ ಮಾತುಕತೆ ನಡೆಸುವಂತೆ ಇರಾನಿಯನ್ನರಿಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಕಳಿಸಿದ ವಿಡಿಯೊ ಸಂದೇಶದಲ್ಲಿ, ಇರಾನ್ ಜನರಿಗೆ ಮತ್ತು ನಾಯಕರಿಗೆ ಹೊಸ ಆರಂಭದ ಪ್ರಸ್ತಾಪ ಮಾಡಿ, ತಮ್ಮ ಆಡಳಿತವು ರಾಯಭಾರಕ್ಕೆ ಬದ್ಧವಾಗಿದೆಯೆಂದು ತಿಳಿಸಿದ್ದರು. |