ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಅವರು ಮೂರು ಭಯೋತ್ಪಾದಕ ತಂಡಗಳಿಂದ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದು, ಇಸ್ಲಾಮಾಬಾದ್‌ನ ಲಾಹೋರ್‌ನಲ್ಲಿ ಅಥವಾ ಅವರ ತವರುಪಟ್ಟಣ ಮುಲ್ತಾನ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಅವರನ್ನು ಗುರಿಮಾಡಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ಮಾಡಿದ ಮಾದರಿಯಲ್ಲಿ ಪ್ರಧಾನಮಂತ್ರಿಯನ್ನು ಆತ್ಮಾಹುತಿ ಬಾಂಬರ್ ಅಥವಾ ಗೆರಿಲ್ಲಾ ದಾಳಿ ಮೂಲಕ ಹತ್ಯೆ ಮಾಡಬಹುದೆಂದು ಒಳಾಡಳಿತ ಸಚಿವಾಲಯ ಸೇರಿದಂತೆ ಸರ್ಕಾರಕ್ಕೆ ಗುಪ್ತಚರ ಸಂಸ್ಥೆಗಳು ಕಳಿಸಿರುವ ವರದಿ ತಿಳಿಸಿದೆ.
ಸ್ಪೋಟಗಳು ಮತ್ತು ಆತ್ಮಾಹುತಿ ದಾಳಿಗಳ ಸಂಯೋಗದ ಮೂಲಕ ಅಥವಾ ಶ್ರೀಲಂಕಾ ತಂಡದ ಮೇಲೆ ನಡೆದ ಗೆರಿಲ್ಲಾ ದಾಳಿಯ ಮಾದರಿಯಲ್ಲಿ ಬುಡಕಟ್ಟು ಪ್ರದೇಶದ ಮೂಲದ ಭಯೋತ್ಪಾದಕರು ಗಿಲಾನಿ ಹತ್ಯೆಗೆ ಯೋಜಿಸಿದ್ದಾರೆಂದು ವರದಿ ಹೇಳಿದೆ. ಗಿಲಾನಿ ಹತ್ಯೆ ಮಾಡುವ ಸಂಚಿನಲ್ಲಿ ಭಯೋತ್ಪಾದಕರ ಮೂರು ತಂಡಗಳು ಇಸ್ಲಾಮಾಬಾದ್, ಲಾಹೋರ್ ಮತ್ತು ಮುಲ್ತಾನ್‌ನಲ್ಲಿ ಏಕಕಾಲದ್ಲಿ ಕೆಲಸ ಮಾಡುತ್ತಿವೆ ಎಂದು ವರದಿ ಹೇಳಿದೆ.
ಏತನ್ಮಧ್ಯೆ ಫೆಡರಲ್ ಸರ್ಕಾರವು ಸೇನೆಯ ಕಮಾಂಡ್‌ನಲ್ಲಿರುವ ಅರೆಮಿಲಿಟರಿ ಪಡೆಯನ್ನು ಕರೆಸಿದ್ದು, ಇಸ್ಲಾಮಾಬಾದ್‌ಗೆ ಭಯೋತ್ಪಾದಕರ ಬೆದರಿಕೆ ಎದುರಿಸಲು ಆಡಳಿತಕ್ಕೆ ನೆರವಾಗಲಿದೆ. ಪಡೆಗಳು ರಾಜಧಾನಿಯ ಪ್ರಮುಖ ವ್ಯಕ್ತಿಗಳನ್ನು ಮತ್ತು ಸೂಕ್ಷ್ಮ ನೆಲೆಗಳನ್ನು ರಕ್ಷಿಸಲಿದೆ ಎಂದು ಮೂಲಗಳು ಹೇಳಿವೆ. |