ಬಹುತೇಕ ಮಹಿಳೆಯರಿಂದ ತುಂಬಿದ 22 ಶಂಕಿತ ಉಗ್ರಗಾಮಿಗಳನ್ನು ಬಾಂಗ್ಲಾದೇಶದ ಭದ್ರತಾಪಡೆಗಳು ಬಂಧಿಸಿವೆ. ನೈರುತ್ಯ ಬಾರಿಸಲ್ ಜಿಲ್ಲೆಯಲ್ಲಿ ಇಸ್ಲಾಮಿಕ್ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ವಿದೇಶಿ ಕಚೇರಿಗಳ ಸುತ್ತ ಭದ್ರತೆ ಬಿಗಿಗೊಳಿಸಿದ ಬಳಿಕ ಬಾರಿಸಾಲ್ ಜಿಲ್ಲೆಯಲ್ಲಿ ದಾಳಿ ಮಾಡಿದ ಭದ್ರತಾ ಪಡೆಗಳು ಮಹಿಳಾ ಉಗ್ರರನ್ನು ಬಂಧಿಸಿವೆ.
ಜಿಲ್ಲೆಯಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾಗ 21 ಮಹಿಳಾ ಉಗ್ರರಿದ್ದ 22 ಉಗ್ರಗಾಮಿಗಳನ್ನು ಕ್ಷಿಪ್ರಪಡೆಯ ತುಕಡಿ ಬಂಧಿಸಿದೆ ಎಂದು ಡೇಲಿ ಸ್ಟಾರ್ ಸುದ್ದಿಪತ್ರಿಕೆ ವರದಿ ಮಾಡಿದೆ. ತುಕಡಿಯ ಕಚೇರಿಯಲ್ಲಿ ಶಂಕಿತ ಭಯೋತ್ಪಾದಕರ ತನಿಖೆ ನಡೆಸಲಾಗುತ್ತಿದೆಯೆಂದು ಲೆ.ಕಮಾಂಡರ್ ಮಮ್ಮುನುರ್ ರಷೀದ್ ತಿಳಿಸಿದ್ದಾರೆ.
ಬಾರಿಸಾಲ್‌ನಲ್ಲಿ ಉಗ್ರಗಾಮಿಗಳಿಂದ ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್ ಕಚೇರಿಗಳಿಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮತ್ತಿತರ ವಿದೇಶಿ ನೆರವಿನ ಸಂಸ್ಥೆಗಳ ಸುತ್ತ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದರು.
ಜಮಾತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಕಾರ್ಯಕರ್ತರು ಎರಡು ಸಂಸ್ಥೆಗಳ ಪ್ರಾದೇಶಿಕ ಕಚೇರಿಗಳಿಗೆ ಪತ್ರಗಳನ್ನು ಕಳಿಸಿ, ಕಚೇರಿಗಳನ್ನು ಮುಚ್ಚುವಂತೆ ಅಥವಾ ಸಾವನ್ನು ಎದುರಿಸುವಂತೆ ಬೆದರಿಕೆ ಹಾಕಿತ್ತು. |