ಪಾಕಿಸ್ತಾನದ ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯೂ.ಖಾನ್ ಬಹುಷಃ ವಿಶ್ವದಲ್ಲೇ ಅತೀ ದೊಡ್ಡ ಅಣ್ವಸ್ತ್ರ ಪ್ರಸರಣಕಾರ ಎಂದು ಅಮೆರಿಕ ಖಾನ್ ಅವರಿಗೆ ಪಟ್ಟ ನೀಡಿದ್ದು, ಪ್ರಸರಣದಿಂದ ಉಂಟಾದ ಹಾನಿ ಎಣಿಸಲಸದಳ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸದನಸಮಿತಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದರು. ಖಾನ್ ಪ್ರಸರಣ ಜಾಲವನ್ನು ಸ್ಥಗಿತಗೊಳಿಸುವಂತೆ ನಾವು ಸ್ಪಷ್ಟವಾಗಿ ಆದೇಶಿಸಿದ್ದರಿಂದ ಹಾಗೆ ಮಾಡಲಾಗಿದೆ. ಖಾನ್ ಜತೆ ಸಖ್ಯ ಹೊಂದಿದ ವ್ಯಕ್ತಿಗಳು ವ್ಯವಹಾರ ಕೈಬಿಟ್ಟಿದ್ದಾರೆ ಅಥವಾ ಜೈಲುಸೇರಿದ್ದಾರೆಂದು ಕ್ಲಿಂಟನ್ ತಿಳಿಸಿದರು.
73 ವರ್ಷ ವಯಸ್ಸಿನ ಖಾನ್ ಅವರಿಗೆ ಮತ್ತು ಅವರ ಜಾಲದಲ್ಲಿದ್ದ ವ್ಯಕ್ತಿಗಳಿಗೆ ಅಮೆರಿಕ ದಿಗ್ಬಂಧನ ವಿಧಿಸಿದೆ. ಉತ್ತರಕೊರಿಯ ಮತ್ತು ಇರಾನ್‌ಗೆ ಅಣ್ವಸ್ತ್ರ ತಯಾರಿಕೆ ಗುಟ್ಟನ್ನು ಖಾನ್ ಹಸ್ತಾಂತರಿಸಿದ್ದನ್ನು ಆಗಿನ ಅಧ್ಯಕ್ಷ ಮುಷರಫ್ ಬಯಲು ಮಾಡಿದ ಬಳಿಕ ಖಾನ್‌ರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಖಾನ್‌ರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ. |