ಪಾಕಿಸ್ತಾನದಲ್ಲಿ ತಾಲಿಬಾನಿಗಳು ಶೀಘ್ರಗತಿಯಲ್ಲಿ ವಿಸ್ತರಿಸುತ್ತಿರುವುದು ಅತ್ಯಂತ ಮನಸ್ಸು ಕಲಕುವ ಸಂಗತಿಯಾಗಿದೆ ಎಂದು ಅಮೆರಿಕ ತಿಳಿಸಿದ್ದು, ಉಗ್ರವಾದವನ್ನು ಎದುರಿಸುವ ಪಾಕಿಸ್ತಾನದ ಸಾಮರ್ಥ್ಯಕ್ಕೂ ಇಸ್ಲಾಮಾಬಾದ್‌ಗೆ ನೀಡುವ ಆರ್ಥಿಕ ನೆರವಿಗೂ ನೇರ ಸಂಪರ್ಕವಿರುವುದಾಗಿ ಹೇಳಿದೆ.
ಇಸ್ಲಾಮಾಬಾದ್‌ಗೆ 100 ಕಿಮೀ ದೂರದಲ್ಲಿ ಲಗ್ಗೆ ಹಾಕಿ ಬರ್ನರ್ ಜಿಲ್ಲೆಯನ್ನು ತಾಲಿಬಾನ್ ಕೈವಶ ಮಾಡಿಕೊಂಡ ಸುದ್ದಿ ಅಮೆರಿಕವನ್ನು ದಿಗ್ಭ್ರಾಂತಗೊಳಿಸಿದೆ.
ಕಳೆದ ಕೆಲವು ದಿನಗಳ ಹಿಂದಿನ ಸುದ್ದಿ ಅತ್ಯಂತ ಕ್ಷೋಭೆಯದ್ದಾಗಿದೆ. ಅಮೆರಿಕ ಆಡಳಿತವು ತೀವ್ರ ಕಳವಳಗೊಂಡಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ತಿಳಿಸಿದರು.
ಪ್ರಸಕ್ತ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಹದಗೆಡುತ್ತಿರುವ ಸ್ಥಿತಿ ಬರಾಕ್ ಒಬಾಮಾ ಅವರ ಬಹುತೇಕ ಸಮಯವನ್ನು ತಿಂದುಹಾಕುತ್ತಿದೆ ಎಂದು ಅವರು ತಿಳಿಸಿದ್ದು, ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಪರಿಸ್ಥಿತಿಗಳು ಆಡಳಿತದ ಮುಖ್ಯವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ ಎಂದು ಗಿಬ್ಸ್ ಹೇಳಿದರು. |