ಶೀಘ್ರದಲ್ಲೇ ಅಧಿಪತ್ಯವನ್ನು ವಿಸ್ತರಿಸುತ್ತಿರುವ ತಾಲಿಬಾನ್ ಉಗ್ರಗಾಮಿಗಳು ಇಸ್ಲಾಮಾಬಾದ್ ಅಸ್ತಿತ್ವಕ್ಕೆ ಬೆದರಿಕೆಯಾಗಿದ್ದು, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ನಾಯಕರಿಗೆ ಅಮೆರಿಕ ಶುಕ್ರವಾರ ತಿಳಿಸಿದೆ.
ತಾಲಿಬಾನ್ ಒಡ್ಡಿರುವ ಬೆದರಿಕೆ ಬಗ್ಗೆ ಕೆಲವು ನಾಯಕರಿಗೆ ಖಂಡಿತವಾಗಿ ಅರ್ಥವಾಗಿದೆಯೆಂದು ತಾವು ಭಾವಿಸುವುದಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.
ಆದರೆ ಆ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಉತ್ತರ ಕೆರೊಲಿನಾದಲ್ಲಿ ಲೆಜೊನೆ ಶಿಬಿರಕ್ಕೆ ಭೇಟಿ ನೀಡಿದಾಗ ಅವರು ತಿಳಿಸಿದರು. ಸ್ವಾತ್ ಕಣಿವೆಗಿಂತ ಆಚೆ ತಾಲಿಬಾನ್ ತನ್ನ ಕರಾಳ ಬಾಹು ಚಾಚುತ್ತಿದೆಯೆಂಬ ವರದಿಗಳನ್ನು ಉಲ್ಲೇಖಿಸಿ, ಆಫ್ಘಾನಿಸ್ತಾನದಲ್ಲಿ ಸಮ್ಮಿಶ್ರ ಕೂಟದ ಪ್ರಯತ್ನಗಳಿಗೆ ಪಾಕಿಸ್ತಾನದ ಪ್ರಜಾಪ್ರಭುತ್ವ ಸರ್ಕಾರದ ಸ್ಥಿರತೆ ಮತ್ತು ದೀರ್ಘಾಯಸ್ಸು ಅಗತ್ಯವಾಗಿದೆ.
ಇಸ್ಲಾಮಾಬಾದ್‌ನಲ್ಲಿ ಸರ್ಕಾರದ ಜತೆ ಭವಿಷ್ಯದ ಸಹಭಾಗಿತ್ವಕ್ಕೆ ಸಹ ಇದು ಮುಖ್ಯವಾಗಿದೆ ಎಂದು ಗೇಟ್ಸ್ ಹೇಳಿದರು. ನಾವು ಅವರಿಗೆ ಬೆಂಬಲ ನೀಡಲು ಇಚ್ಛಿಸಿದ್ದೇವೆ. ಆದರೆ ತಮ್ಮ ರಾಷ್ಟ್ರಕ್ಕೆ ಒಡ್ಡಿರುವ ನಿಜವಾದ ಬೆದರಿಕೆಗಳನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಅವರು ನುಡಿದರು. ಇಸ್ಲಾಮಾಬಾದ್‌ಗೆ 100 ಕಿಮೀ ದೂರದ ಬರ್ನೆರ್ ಜಿಲ್ಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ತಾಲಿಬಾನ್ ಲಗ್ಗೆಯಿಂದ ಅಮೆರಿಕವನ್ನು ದಿಗ್ಮೂಢಗೊಳಿಸಿದ್ದು, ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆಯೆಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಕಾರವಾದ ಪ್ರತಿಕ್ರಿಯೆಯಲ್ಲಿ ಬಿಂಬಿತವಾಗಿದೆ. |