ಇರಾಕ್‌ನಲ್ಲಿ ಅಲ್ ಖಾಯಿದಾ ಮುಖ್ಯಸ್ಥನನ್ನು ಸೆರೆಹಿಡಿದಿರುವುದಾಗಿ ಇರಾಕ್ ಮಿಲಿಟರಿ ಪ್ರಕಟಿಸಿದೆ. ಇರಾಕ್ ಅಲ್ ಖಾಯಿದಾ ಬಾಸ್ ಅಬು ಓಮರ್ ಅಲ್-ಬಾಗ್ದಾದಿಯನ್ನು ಶುಕ್ರವಾರ ಬಾಗ್ದಾದ್‌ನಲ್ಲಿ ಬಂಧಿಸಲಾಗಿದೆಯೆಂದು ಬಾಗ್ದಾದ್ ಭದ್ರತಾ ಅಧಿಕಾರಿ ಮೇ.ಜನರಲ್ ಕಾಸಿಂ ಅಟ್ಟಾ ಗುರುವಾರ ತಿಳಿಸಿದರು. ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಇರಾಕಿ ಪೊಲೀಸರು ಅವನನ್ನು ಬಂಧಿಸಿದ್ದಾರೆಂದು ಅಟ್ಟಾ ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾಕ್ ಪಡೆಗಳ ವಿರುದ್ಧ ಸೆಣೆಸುತ್ತಿರುವ ಲಾಡೆನ್‌ಗೆ ನಿಷ್ಠರಾದ ಅಲ್ ಖಾಯಿದಾ ಬಂಡುಕೋರರ ಸಮೂಹದ ಸ್ವಯಂಘೋಷಿತ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್‌ನ ನಾಯಕನೆಂದು ಬಾಗ್ದಾದಿಯನ್ನು ಬಣ್ಣಿಸಲಾಗಿದೆ.
ಈ ಹಿಂದೆ ಅನೇಕ ಬಾರಿ ಅವನನ್ನು ಸೆರೆಹಿಡಿಯಲಾಗಿದೆ ಅಥವಾ ಹತ್ಯೆ ಮಾಡಲಾಗಿದೆಯೆಂದು ವರದಿಯಾಗಿತ್ತು. ಅಮೆರಿಕ ಮಿಲಿಟರಿ ಬಾಗ್ದಾದಿಯನ್ನು ಕಪಟಿಯೆಂದು ಜರಿದಿದ್ದು, ವಿದೇಶಿ ಹೋರಾಟಗಾರರ ನೇತೃತ್ವವಿರುವ ಸಂಘಟನೆಗೆ ಇರಾಕಿ ಮುಖವನ್ನು ಬಿಂಬಿಸಲು ಯತ್ನಿಸುತ್ತಿದ್ದಾನೆಂದು ಆರೋಪಿಸಿದೆ.
ಬಾಗ್ದಾದಿ ನಕಲಿ ವ್ಯಕ್ತಿತ್ವವಾಗಿದ್ದು, ಧ್ವನಿಮುದ್ರಿಕೆಗಳಲ್ಲಿ ಅವನ ಹೆಸರಿನಲ್ಲಿ ಬಿಡುಗಡೆಯಾದ ಧ್ವನಿ ಒಬ್ಬ ನಟನ ಧ್ವನಿಯೆಂದು ಅಮೆರಿಕದ ಮಿಲಿಟರಿ ವಕ್ತಾರ ತಿಳಿಸಿದ್ದರು.
ಇರಾಕ್ ಅಲ್ ಖಾಯಿದಾದ ನಿಜವಾದ ನಾಯಕ ಅಬು ಹಮ್ಜಾ ಅಲ್ ಮುಹಾಜಿರ್, ಅಬು ಅಯೂಬ್ ಅಸ್ ಮಾಸ್ರಿ ಎಂದೇ ಪರಿಚಿತನಾಗಿದ್ದು, ಹಿರಿಯ ಈಜಿಪ್ಟ್ ಉಗ್ರಗಾಮಿಯಾಗಿದ್ದಾನೆ. ಅವನ ಜೋರ್ಡಾನ್ ಪೂರ್ವಾಧಿಕಾರಿ ಅಬು ಮುಸಾಬ್ ಅಲ್ ಜರ್ಕಾವಿ ಅಮೆರಿಕದ ವಾಯುದಾಳಿಯಲ್ಲಿ ಹತ್ಯೆಯಾದ ಬಳಿಕ ಅಲ್ ಖಾಯಿದಾ ಮುಖಂಡನಾಗಿದ್ದಾನೆಂದು ಅಮೆರಿಕ ಮಿಲಿಟರಿ ತಿಳಿಸಿದೆ. |