ತಮ್ಮ ಆದೇಶಕ್ಕೆ ಸವಾಲು ಹಾಕುವುದಕ್ಕೆ ಅಥವಾ ಪರ‌್ಯಾಯ ಆಡಳಿತ ಸ್ಥಾಪನೆಗೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ಜರ್ದಾರಿ ಅಮೆರಿಕಕ್ಕೆ ಭರವಸೆ ನೀಡುವ ಮೂಲಕ ಅದರ ಕಳವಳ ಶಮನಕ್ಕೆ ಯತ್ನಿಸಿದ್ದಾರೆ.
ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಅಮೆರಿಕದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಅವರಿಗೆ ಜರ್ದಾರಿ ಮೇಲಿನಂತೆ ಆಶ್ವಾಸನೆ ನೀಡಿದ್ದಾರೆ.
ಸ್ವಾತ್ ಕಣಿವೆಯ ತಾಲಿಬಾನ್ ಫೆಡರಲ್ ರಾಜಧಾನಿ ಸಮೀಪದಲ್ಲಿ ಎರಡು ಜಿಲ್ಲೆಗಳನ್ನು ತಾಲಿಬಾನ್ ಅತಿಕ್ರಮಿಸಿಕೊಂಡಿದೆಯೆಂಬ ವರದಿಗಳ ನೇಪಥ್ಯದಲ್ಲಿ ಹಾಲ್‌ಬ್ರೂಕ್ ಜರ್ದಾರಿಗೆ ಕರೆ ಮಾಡಿ ಪಾಕ್‌ನ ಪ್ರಕ್ಷುಬ್ಧ ಪರಿಸ್ಥಿತಿ ಕುರಿತು ವಿಚಾರಿಸಿದರು.
ಪಾಕಿಸ್ತಾನದಲ್ಲಿ ತಾನಿಬಾನ್ ತನ್ನ ಪ್ರಭಾವ ವಿಸ್ತರಿಸಿಕೊಂಡು ಬೇರುಬಿಡುತ್ತಿರುವ ಬೆದರಿಕೆ ಕುರಿತು ಉಭಯ ನಾಯಕರು ಚರ್ಚಿಸಿದರು. ಉಗ್ರವಾದ ಮತ್ತು ಭಯೋತ್ಪಾದನೆಯಿಂದ ಹುಟ್ಟಿರುವ ಸಮಸ್ಯೆಗಳು ಸರ್ಕಾರಕ್ಕೆ ತಿಳಿದಿರುವುದಾಗಿ ಜರ್ದಾರಿ ಮಾತುಕತೆಯ ಸಂದರ್ಭದಲ್ಲಿ ಹೇಳಿದರು.
ತಾಲಿಬಾನ್ ಒಡ್ಡಿರುವ ಬೆದರಿಕೆ ಸ್ವರೂಪವನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬ ಭಯದಿಂದ ಪ್ರೇರಿತವಾಗಿ ಅಮೆರಿಕ ಕರೆ ಮಾಡಿದೆಯೆಂದು ಸುದ್ದಿಪತ್ರಿಕೆ ಡೇಲಿಟೈಮ್ಸ್ ವರದಿ ಮಾಡಿದೆ.ಸ್ವಾತ್ ಕಣಿವೆಯಲ್ಲಿ ಶಾಂತಿ ಒಪ್ಪಂದದ ದುರ್ಲಾಭ ಪಡೆದು ಬುನ್ನೇರ್ ಜಿಲ್ಲೆಯ ಮೇಲೆ ಹಿಡಿತವನ್ನು ತಾಲಿಬಾನ್ ಬಿಗಿಗೊಳಿಸಿದೆಯೆಂದು ವಾಷಿಂಗ್ಟನ್ ನಂಬಿದೆ. |