ಪಾಕಿಸ್ತಾನದಲ್ಲಿ ಪ್ರಸಕ್ತ ಬಿಕ್ಕಟ್ಟಿಗೆ ಅಮೆರಿಕ ಕೂಡ ಆಂಶಿಕವಾಗಿ ಜವಾಬ್ದಾರಿಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಪ್ರತಿಪಾದಿಸಿದ್ದಾರೆ.
ಸೋವಿಯತ್ ಆಫ್ಘಾನಿಸ್ತಾನದಿಂದ ನಿರ್ಗಮಿಸಿದ ಕೂಡ ಅಮೆರಿಕ ಅಕ್ಷರಶಃ ಪಾಕಿಸ್ತಾನವನ್ನು ತ್ಯಜಿಸಿತೆಂದು ಹಿಲರಿ ಹೇಳಿದರು. ಸೋವಿಯತ್ ಒಕ್ಕೂಟದ ಪತನದ ಬಳಿಕ ಅಮೆರಿಕ ಪಾಕಿಸ್ತಾನ ಮಿಲಿಟರಿ ಮತ್ತು ಐಎಸ್‌ಐ ಜತೆ ವ್ಯವಹಾರ ನಿಲ್ಲಿಸಿತು. ನಾವು ಈಗ ಎದುರಿಸುವ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗೆ ನಮ್ಮ ಕೊಡುಗೆಯೂ ಇದೆಯೆಂದು ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಕ್ಲಿಂಟನ್ ತಿಳಿಸಿದರು.
'ಅಮೆರಿಕ ಪಾಕಿಸ್ತಾನದೊಳಕ್ಕೆ ಆಗಮಿಸಿದ ಮತ್ತು ನಿರ್ಗಮಿಸಿದ ಇತಿಹಾಸವನ್ನು ಹೊಂದಿದೆ. ನಾವು ಈಗ ಹೋರಾಡುತ್ತಿರುವ ಜನರಿಗೆ 20 ವರ್ಷಗಳ ಕೆಳಗೆ ನಾವು ಆರ್ಥಿಕ ನೆರವು ನೀಡಿ ಪೋಷಿಸಿದ್ದೆವು. ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಟಕ್ಕೆ ಬದ್ಧರಾದ ನಾವು ಹಾಗೆ ಮಾಡಿದೆವು. ಸೋವಿಯತ್ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು.
ಮಧ್ಯಏಷ್ಯಾ ಅವರ ಸುಪರ್ದಿಗೆ ಬರುವುದು ನಮಗಿಷ್ಟವಾಗಲಿಲ್ಲವಾದ್ದರಿಂದ ಕಾರ್ಯೋನ್ಮುಖರಾದೆವು' ಎಂದು ಅವರು ನುಡಿದರು. 'ಅಧ್ಯಕ್ಷ ರೇಗನ್ ಕಾಂಗ್ರೆಸ್ ಜತೆ ಸಹಭಾಗಿತ್ವದಲ್ಲಿ ಡೆಮಾಕ್ರಟರ ನೇತೃತ್ವದಲ್ಲಿ ಸೋವಿಯತ್ ವಿರುದ್ಧ ಪರೋಕ್ಷ ಹೋರಾಟಕ್ಕಿಳಿದರು.
ಐಎಸ್‌ಐ ಮತ್ತು ಪಾಕಿಸ್ತಾನ ಮಿಲಿಟರಿ ಜತೆ ವ್ಯವಹರಿಸಿ ಮುಜಾಹಿದ್ದೀನ್‌ಗಳನ್ನು ನೇಮಕ ಮಾಡಿಕೊಂಡು,ಸೌದಿ ಅರೇಬಿಯ ಮತ್ತಿತರ ಕಡೆಗಳಿಂದ ಕೆಲವರನ್ನು ಕರೆಸಿ ಸೋವಿಯತ್ ರಷ್ಯಾವನ್ನು ಸೋಲಿಸೋಣವೆಂಬ ತೀರ್ಮಾನಕ್ಕೆ ಅವರು ಬಂದರು.
ಸೋವಿಯತ್ ಸಮರಾಂಗಣದಿಂದ ಹಿಂದೆ ಸರಿದರು ಮತ್ತು ಬಿಲಿಗಟ್ಟಲೆ ಡಾಲರ್ ನಷ್ಟ ಮಾಡಿಕೊಂಡರು. ಅದೇ ಸೋವಿಯತ್ ಒಕ್ಕೂಟದ ಕುಸಿತಕ್ಕೆ ಕಾರಣವಾಯಿತು 'ಎಂದು ಕ್ಲಿಂಟನ್ ಹೇಳಿದರು.'ಆ ನೀತಿಯ ಫಲವೇ ಇಂದು ಪಾಕಿಸ್ತಾನ ಅಗ್ನಿಕುಂಡವಾಗಿ ಪರಿವರ್ತನೆಯಾಗಿದೆ. ಆದ್ದರಿಂದ ಅಮೆರಿಕ ಕೂಡ ಇದಕ್ಕೆ ಹೊಣೆ ಹೊತ್ತುಕೊಳ್ಳಬೇಕು' ಎಂದು ಕ್ಲಿಂಟನ್ ಪ್ರತಿಪಾದಿಸಿದರು. |