ಶ್ರೀಲಂಕಾದಲ್ಲಿ ಕಳೆದ ಮೂರು ತಿಂಗಳಿಂದೀಚೆಗೆ ತಮಿಳು ಉಗ್ರರು ಮತ್ತು ಸೇನೆಯ ನಡುವೆ ಕದನದಲ್ಲಿ ಆಹುತಿಯಾದವರ ಸಂಖ್ಯೆಯ ಬಗ್ಗೆ ವಿಶ್ವಸಂಸ್ಥೆ ಪ್ರಕಟಿಸಿದ ಖಾಸಗಿ ದಾಖಲೆಯ ವಿವರ ಬೆಚ್ಚಿಬೀಳಿಸುವಂತಿದ್ದು, ಸುಮಾರು 6500 ತಮಿಳ ಜನಾಂಗೀಯರು ಅಸುನೀಗಿದ್ದಾರೆಂದು ಅದು ಹೇಳಿದೆ.
ಶ್ರೀಲಂಕಾದಲ್ಲಿ ಇತ್ತೀಚೆಗೆ ರಾಜತಾಂತ್ರಿಕ ಕಚೇರಿಗಳ ನಡುವೆ ವಿತರಣೆಯಾದ ಖಾಸಗಿ ವಿಶ್ವಸಂಸ್ಥೆ ದಾಖಲೆಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಕನಿಷ್ಠ 6432 ನಾಗರಿಕರು ಸತ್ತಿದ್ದಾರೆ ಮತ್ತು 13,946 ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಸಾವುನೋವಿನ ಸಂಖ್ಯೆಯನ್ನು ಪರಿಶೀಲಿಸಿದ ಅಂಕಿಅಂಶವೆಂದು ಹೇಳಲಾಗಿದ್ದು, ಸುದ್ದಿಸಂಸ್ಥೆಯೊಂದಕ್ಕೆ ವಿದೇಶಿ ರಾಜತಾಂತ್ರಿಕರೊಬ್ಬರು ಹಸ್ತಾಂತರಿಸಿದ್ದಾರೆ.
ಸಾವುನೋವಿನ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ವಿಶ್ವಸಂಸ್ಥೆ ನಿರಾಕರಿಸಿದ್ದು, ದಾಖಲೆ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. 'ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಟಇ ನಡುವೆ ವಾನ್ನಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡುವೆ 50,000 ನಾಗರಿಕರು ಸಿಕ್ಕಿಬಿದ್ದಿದ್ದಾರೆ.
ಸರ್ಕಾರಿ ಪಡೆಗಳು ತಮಿಳು ವ್ಯಾಘ್ರಗಳ ವಿರುದ್ಧ ಅಂತಿಮ ಪ್ರಹಾರ ನಡೆಸಿದ್ದಾರೆಂದು' ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾನವೀಯ ವ್ಯವಹಾರಗಳನ್ನು ಕುರಿತ ಹೆಚ್ಚುವರಿ ಪ್ರಧಾನಕಾರ್ಯದರ್ಶಿ ಕ್ಯಾಥರಿನ್ ಬ್ರಾಗ್ ತಿಳಿಸಿದರು.
ಶ್ರೀಲಂಕಾದಲ್ಲಿ ತಮಿಳರ ಕಗ್ಗೊಲೆ ಬಗ್ಗೆ ಭಾರತದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ. ನಾರಾಯಣನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರನ್ನು ಕದನವಿರಾಮಕ್ಕೆ ಒತ್ತಾಯಿಸುವ ಸಲುವಾಗಿ ಶ್ರೀಲಂಕಾಗೆ ಕಳಿಸಿದೆ. ಅಧ್ಯಕ್ಷ ಮಹೀಂದ್ರ ರಾಜಪಕ್ಷೆಯನ್ನು ಅಧಿಕಾರಿಗಳು ಭೇಟಿ ಮಾಡಿದ್ದು, ಭೇಟಿಯ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. |