ಶ್ರೀಲಂಕಾದ ಉತ್ತರದ ಕದನವಲಯದಲ್ಲಿ ಸಿಕ್ಕಿಬಿದ್ದಿರುವ ಹತ್ತಾರು ಸಾವಿರ ನಾಗರಿಕರು ಹಸಿವಿನಿಂದ ಹಾಹಾಕಾರ ಪಡುತ್ತಿದ್ದಾರೆಂದು ಬಂಡುಕೋರರು ಎಚ್ಚರಿಸಿರುವ ನಡುವೆ, ಬಿಕ್ಕಟ್ಟಿನ ಅಂದಾಜಿಗೆ ವಿಶ್ವಸಂಸ್ಥೆ ಮಾನವೀಯ ಅಧಿಕಾರಿಯನ್ನು ಕಳಿಸಿದೆ.
ಬಂಡುಕೋರರ ಹಿಡಿತದಲ್ಲಿದ್ದ ಸಣ್ಣ ಪ್ರದೇಶದಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕದನವಲಯದಿಂದ ನಿರ್ಗಮಿಸಿದ್ದು, ಆಸ್ಪತ್ರೆಗಳು ಮತ್ತು ಸರ್ಕಾರದ ನಿರಾಶ್ರಿತರ ಶಿಬಿರಗಳು ತುಂಬಿತುಳುಕುತ್ತಿವೆಯೆಂದು ನೆರವು ಕಾರ್ಯಕರ್ತರು ಹೇಳಿದ್ದಾರೆ. ಇನ್ನೂ 50,000 ನಾಗರಿಕರು ಕದನವಲಯದಲ್ಲಿ ಸಿಕ್ಕಿಬಿದ್ದಿದ್ದಾರೆಂದು ವಿಶ್ವಸಂಸ್ಥೆ ಹೇಳಿದೆ.
'ಆದರೆ ವಿಶ್ವಸಂಸ್ಥೆ ಅಂದಾಜು ಮಾಡಿದ್ದಕ್ಕಿಂತ ಮೂರು ಪಟ್ಟು ನಾಗರಿಕರು ಕದನವಲಯದಲ್ಲಿ ಸಿಕ್ಕಿಬಿದ್ದಿದ್ದು, ಆಹಾರ ಪದಾರ್ಥಗಳ ಪ್ರಮಾಣ ದಿನದಿನಕ್ಕೂ ಕ್ಷೀಣಿಸುತ್ತಿದ್ದು, ಜನರು ಹಸಿವಿನಿಂದ ತತ್ತರಿಸುವುದು ಸನ್ನಿಹಿತವಾಗಿದೆಯೆಂದು' ತಮಿಳು ವ್ಯಾಘ್ರಗಳು ಹೇಳುತ್ತಿದ್ದಾರೆ. ಕದನವಲಯದಲ್ಲಿ ಆಹಾರ ಮತ್ತು ಔಷಧದ ತೀವ್ರ ಕೊರತೆಯಿದ್ದು, ಜನರು ಹಸಿವಿನಿಂದ ಸಾವಪ್ಪುತ್ತಿದ್ದಾರೆಂದು ಉನ್ನತ ಸರ್ಕಾರಿ ಆರೋಗ್ಯ ಅಧಿಕಾರಿ ಡಾ. ತಂಗಮುತ್ತು ಸತ್ಯಮೂರ್ತಿ ಕೂಡ ಕದನವಲಯದಲ್ಲಿ ತಿಳಿಸಿದರು.
ಈ ಪ್ರದೇಶಕ್ಕೆ ಆಹಾರವನ್ನು ತಕ್ಷಣವೇ ಪೂರೈಸಬೇಕೆಂದು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಂಡುಕೋರರು ಕರೆ ನೀಡಿದ್ದಾರೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವಿಳಂಬದ ಫಲವಾಗಿ ಡಾರ್ಫರ್ ಮತ್ತಿತರ ಕಡೆ ಎದುರಿಸಿದ ಬಿಕ್ಕಟ್ಟಿಗೆ ಸಮನಾಗಬಹುದು ಅಥವಾ ಅದಕ್ಕಿಂತ ಮಾರಕವಾದ ಬಿಕ್ಕಟ್ಟು ಸಂಭವಿಸಬಹುದೆಂದು ತಮಿಳುವೆಬ್ ಸೈಟಿನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಸಂಘಟನೆ ತಿಳಿಸಿದೆ. |