ದ್ವೀಪದ ಉತ್ತರದಲ್ಲಿ ಸಮರವನ್ನು ತಕ್ಷಣವೇ ಮುಕ್ತಾಯ ಮಾಡುವಂತೆ ಶ್ರೀಲಂಕಾ ಮತ್ತು ಎಲ್‌ಟಿಟಿಇಗೆ ಅಮೆರಿಕ ಕಠಿಣ ಆದೇಶ ನೀಡಿದ್ದು, ಜನಾಂಗೀಯ ಸಂಘರ್ಷವನ್ನು ಮಿಲಿಟರಿ ಬಲದ ಮೂಲಕ ನಿಗ್ರಹಿಸುವ ಪ್ರಸಕ್ತ ಕ್ರಮಗಳಿಂದ ಶ್ರೀಲಂಕಾದ ಏಕತೆ ಮತ್ತು ಸಾಮರಸ್ಯ ಅಪಾಯಕ್ಕೆ ಗುರಿಯಾಗುತ್ತದೆಂದು ಎಚ್ಚರಿಸಿದೆ.
ಅಧ್ಯಕ್ಷ ಒಬಾಮಾ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ಶ್ರೀಲಂಕಾ ಸಂಘರ್ಷದ ಬಗ್ಗೆ ಪ್ರಥಮ ಹೇಳಿಕೆ ನೀಡಿದ ಶ್ವೇತಭವನ, ಎರಡೂ ಕಡೆಗಳಿಂದ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಎಚ್ಚರಿಸಿದೆ. ಪ್ರಸಕ್ತ ಪರಿಸ್ಥಿತಿಯ ಮುಂದುವರಿಕೆ ದುರಂತವನ್ನು ಅಧಿಕಗೊಳಿಸುತ್ತದೆ ಮತ್ತು ಸಂಘರ್ಷಕ್ಕೆ ಮಿಲಿಟರಿ ಅಂತ್ಯವು ಮತ್ತಷ್ಟು ವೈರವನ್ನು ಹುಟ್ಟುಹಾಕಿ ಸಾಮರಸ್ಯದ ಆಸೆ ಮತ್ತು ಶ್ರೀಲಂಕಾದ ಏಕತೆಗೆ ಇತಿಶ್ರೀ ಹಾಡುತ್ತದೆಂದು ಶ್ವೇತಭವನ ತಿಳಿಸಿದೆ.
ವಾನ್ನಿ ಪ್ರದೇಶದ ಮುಲ್ಲತಿವುನಲ್ಲಿ 10 ಕಿಮೀ ವ್ಯಾಪ್ತಿಯೊಳಗೆ, ಶ್ರೀಲಂಕಾ ಸರ್ಕರಾ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಸಿಕ್ಕಿಬಿದ್ದಿರುವ ಅಮಾಯಕ ನಾಗರಿಕರ ಸಾವುನೋವಿನ ಬಗ್ಗೆ ಅಮೆರಿಕ ತೀವ್ರ ಕಳವಳಪಟ್ಟಿದೆ. ಯುದ್ಧವಲಯದಿಂದ ಸುರಕ್ಷಿತವಾಗಿ ನಿರ್ಗಮಿಸಲು ನಾಗರಿಕರಿಗೆ ಅವಕಾಶ ನೀಡಿ, ತಕ್ಷಣವೇ ಸಮರ ಅಂತ್ಯಗೊಳಿಸುವಂತೆ ಎರಡೂ ಕಡೆಯವರಿಗೆ ಕರೆ ನೀಡುವುದಾಗಿ ಅದು ಹೇಳಿದೆ. |