ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ 100 ಕಿಮೀ ದೂರದಲ್ಲಿ ಕಲೆತಿರುವ ತಾಲಿಬಾನಿಗಳ ಗುಂಪು ರಾಷ್ಟ್ರದ ಇತಿಹಾಸದಲ್ಲೇ ಗಂಭೀರವಾದ ಬೆದರಿಕೆಯನ್ನು ಸರ್ಕಾರಕ್ಕೆ ಒಡ್ಡಿದೆ.
ಸ್ವಾತ್ ಕಣಿವೆಯ ತಾಲಿಬಾನಿಗಳು ಬುನೇರ್ ಪಟ್ಟಣವನ್ನು ಕೈವಶ ಮಾಡಿಕೊಂಡ ಬಳಿಕ ಶುಕ್ರವಾರ ತಾಲಿಬಾನಿಗಳು ಬುನೇರ್‌ನಿಂದ ನಿರ್ಗಮಿಸುವ ಲಕ್ಷಣಗಳು ಗೋಚರಿಸಿದ್ದವು. ಆದರೆ ಬುನೇರ್‌ನಲ್ಲಿ ಇನ್ನೂ ಅನೇಕ ಮಂದಿ ತಾಲಿಬಾನಿಗಳು ಅಡಗಿರುವುದು ಕಂಡುಬಂದಿದೆ.
ತಾಲಿಬಾನ್ ವಿರುದ್ಧ ಪಾಕಿಸ್ತಾನ ಅಂತಿಮವಾಗಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವ ವರದಿಗಳ ನಡುವೆ ಈ ವಿಷಯ ಬೆಳಕಿಗೆ ಬಂದಿದೆ. ಅಮೆರಿಕದಿಂದ ಕಠಿಣ ಎಚ್ಚರಿಕೆ ಸ್ವೀಕರಿಸಿದ ಬಳಿಕ ಪಾಕಿಸ್ತಾನ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಕುರಿತು ಚಿಂತನೆ ನಡೆಸಿದೆ.
ಈಗಾಗಲೇ ಸ್ವಾತ್ ಕಣಿವೆಯಲ್ಲಿ ಭದ್ರಕೋಟೆ ಸ್ಥಾಪಿಸಿರುವ ತಾಲಿಬಾನ್, ಷರಿಯತ್ ಕಾನೂನು ಜಾರಿಗೆ ಜರ್ದಾರಿಯಿಂದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಹಾಕಿಸಿದ್ದರು. ಅಮೆರಿಕದಿಂದ ಪಾಕ್ ಕಠಿಣ ಸಂದೇಶ ಸ್ವೀಕರಿಸಿದ ಬಳಿಕ ಪಾಕಿಸ್ತಾನದಲ್ಲಿ ವೇಗದ ಗತಿಯ ಬೆಳವಣಿಗೆ ಸಂಭವಿಸಿದ್ದು, ಭಯೋತ್ಪಾದನೆ ಪುಡಿಗೈಯುವುದಾಗಿ ಕಯಾನಿ ಪಣತೊಟ್ಟಿದ್ದಾರೆ.
ತಾಲಿಬಾನ್ ತನ್ನ ಪ್ರಭಾವಲಯ ವಿಸ್ತರಿಸಿಕೊಳ್ಳುತ್ತಿದೆಯೆಂಬ ಜಾಗತಿಕ ಸಮುದಾಯದ ಕಳವಳಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಗಿಲಾನಿ ಪಾಕಿಸ್ತಾನ ಸುರಕ್ಷಿತ ಕೈಗಳಲ್ಲಿರುವುದಾಗಿ ತಿಳಿಸಿದ್ದಾರೆ.
ಬುನೇರ್‌ನಲ್ಲಿ ಎಕೆ-47 ಬಂದೂಕುಗಳನ್ನು ಹಿಡಿದು ಕಳೆದ ಮೂರು ದಿನಗಳಿಂದ ತಾಲಿಬಾನ್ ಉಗ್ರಗಾಮಿಗಳು ಗಸ್ತುತಿರುಗುವಾಗ ಸ್ಥಳೀಯ ಪೊಲೀಸರು ತಮ್ಮ ಬ್ಯಾರಕ್‌ಗಳಲ್ಲಿ ಮುದುರಿಕೊಂಡು ಕುಳಿತಿದ್ದರು. ಆದಾಗ್ಯೂ, ತೀವ್ರವಾದಿ ಧರ್ಮಗುರು ಸೂಫಿ ಮಹಮದ್ ಜತೆ ತಾಲಿಬಾನ್ ಉನ್ನತ ದಂಡಾಧಿಕಾರಿಗಳು ಮತ್ತು ಪ್ರಾಂತೀಯ ಆಡಳಿತದ ನಡುವೆ ಮಾತುಕತೆ ಹಿನ್ನೆಲೆಯಲ್ಲಿ ತಮ್ಮ ಬಂಟರು ಬುನೇರ್‌ನಿಂದ ನಿರ್ಗಮಿಸುತ್ತಿದ್ದಾರೆಂದು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ತಿಳಿಸಿದ್ದಾನೆ. |