ಮುಂಬೈ ಭಯೋತ್ಪಾದನೆ ದಾಳಿಗೆ ಕಾರಣವಾದ ಲಷ್ಕರೆ ತೊಯ್ಬಾ ಇನ್ನಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆ ಇರುವುದರಿಂದ ಲಷ್ಕರೆ ತೊಯ್ಬಾವನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ಅಮೆರಿಕದ ಉನ್ನತ ಮಿಲಿಟರಿ ಕಮಾಂಡರ್ ತಿಳಿಸಿದ್ದಾರೆ.
ಆದರೆ ಭಾರತದ ಮೇಲೆ ಪಾಕಿಸ್ತಾನ ಸದಾ ಹದ್ದಿನ ಕಣ್ಣಿರಿಸುವುದನ್ನು ಬಿಟ್ಟು ತನ್ನ ಗಡಿಯೊಳಕ್ಕಿರುವ ತಾಲಿಬಾನ್ ತೀವ್ರವಾದಿಗಳ ಜತೆ ಸಂಘರ್ಷಕ್ಕೆ ಹೆಚ್ಚು ಗಮನವಹಿಸಬೇಕೆಂದು ಅವರು ಎಚ್ಚರಿಸಿದ್ದಾರೆ.
'ನಾವು ಲಷ್ಕರೆ ತಯ್ಯಬಾವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರು ಹೆಚ್ಚೆಚ್ಚು ಹಾನಿ ಎಸಗಬಹುದು, ಹೆಚ್ಚುವರಿ ದಾಳಿಗಳನ್ನು ನಡೆಸಬಹುದು' ಎಂದು ಕಾಂಗ್ರೆಸ್ ಸಮಿತಿಯ ಮುಂದೆ ಸಾಕ್ಷ್ಯ ನುಡಿಯುತ್ತಾ ಜನರಲ್ ಡೇವಿಡ್ ಪೆಟ್ರಾಸ್ ಮೇಲಿನ ಸಂಗತಿಯನ್ನು ಹೇಳಿದ್ದಾರೆ.
ಪಾಕಿಸ್ತಾನದ ಅಸ್ತಿತ್ವಕ್ಕೆ ತಾಲಿಬಾನ್ ಮುಂತಾದ ಆಂತರಿಕ ತೀವ್ರವಾದಿಗಳು ಮತ್ತು ಸಂಘಟಿತ ಉಗ್ರವಾದಿಗಳು ಬೆದರಿಕೆಯೊಡ್ಡಿದ್ದಾರೆ ಎಂದು ಪೆಟ್ರಾಸ್ ಹೇಳಿದರು. ಪಾಕಿಸ್ತಾನದ ಮಿಲಿಟರಿಯು ಪೂರ್ವಕ್ಕೆ ಭಾರತದ ಕಡೆಗೆ ತನ್ನ ಗಮನವೆಲ್ಲವನ್ನು ಹರಿಸುವ ಬದಲಿಗೆ ಉಗ್ರವಾದಿಗಳ ವಿರುದ್ಧ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
|