ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು,ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿದ್ದು, ಈ ಪಿಡುಗಿನ ಮೂಲೋತ್ಪಾಟನೆಗೆ ಪೋಲೆಂಡ್ ಸಹಕಾರವನ್ನು ಭಾರತ ಕೋರಿದೆ.
ಪೋಲಂಡ್‌ಗೆ ಅಧಿಕೃತ ಭೇಟಿ ನೀಡಿರುವ ರಾಷ್ಟ್ರಪತಿ ಪ್ರತಿಭಾಪಾಟೀಲ್, ಭಾರತ ಮತ್ತು ಪೋಲೆಂಡ್ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಮಾನ ಮೌಲ್ಯಗಳನ್ನು ಹಂಚಿಕೊಂಡಿವೆಯೆಂದು ಹೇಳಿದರು. 'ಈ ಮೌಲ್ಯಗಳಿಗೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಂತಾರಾಷ್ಟ್ರೀಯ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿದೆ.
ಭಯೋತ್ಪಾದನೆಯ ಪಿಡುಗನ್ನು ನಾವು ಒಂದುಗೂಡಿ ಎದುರಿಸುವ ಅಗತ್ಯವಿದೆಯೆಂದು' ಅವರು ನುಡಿದರು.ಈ ಸಂದರ್ಭದಲ್ಲಿ ಮುಂಬೈನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಭಯೋತ್ಪಾದನೆ ದಾಳಿಯನ್ನು ಪೋಲೆಂಡ್ ಖಂಡಿಸಿದ್ದಕ್ಕೆ ತಾವು ಮೆಚ್ಚುಗೆ ಸೂಚಿಸುತ್ತೇವೆಂದು ಪ್ರತಿಭಾ ಪಾಟೀಲ್ ತಮ್ಮ ಗೌರವಾರ್ಥ ಪೋಲಿಷ್ ಸಹವರ್ತಿ ಲೆಕ್ ಕ್ಯಾಸಿಂಸ್ಕಿ ಆಯೋಜಿಸಿದ್ದ ಭೋಜನಕೂಟದಲ್ಲಿ ಹೇಳಿದರು.
'ಸಮಕಾಲೀನ ವಾಸ್ತವತೆಗಳನ್ನು ಸಮರ್ಥವಾಗಿ ಎದುರಿಸುವಂತೆ ವಿಶ್ವಸಂಸ್ಥೆಯಲ್ಲಿ ಸುಧಾರಣೆ ತರುವ ತುರ್ತು ಅಗತ್ಯದಲ್ಲಿ ಭಾರತ ಮತ್ತು ಪೋಲೆಂಡ್ ಎರಡೂ ನಂಬಿಕೆಯಿರಿಸಿದೆ' ಎಂದು ರಾಷ್ಟ್ರಪತಿ ನುಡಿದರು. ವಿಶ್ವಸಂಸ್ಥೆ ಶಾಸನದಲ್ಲಿ ಉಲ್ಲೇಖಿಸಿರುವ ತತ್ವಗಳಿಗೆ ಉಭಯ ರಾಷ್ಟ್ರಗಳು ಬದ್ಧವಾಗಿವೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕೂಡಿರುತ್ತದೆ ಎಂದು ಅವರು ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತದ ಕೋರಿಕೆಗೆ ಪೊಲೆಂಡ್ ಒತ್ತಾಸೆ ಕುರಿತು ಮೆಚ್ಚುಗೆ ಸೂಚಿಸಿದರು.
|