ಖರ್ಚಾದ ಪರಮಾಣು ಇಂಧನ ಕೊಳವೆಗಳ ಮರುಸಂಸ್ಕರಣೆಯನ್ನು ಉತ್ತರಕೊರಿಯ ಆರಂಭಿಸಿರುವುದಾಗಿ ಉತ್ತರ ಕೊರಿಯದ ಮಾಧ್ಯಮ ತಿಳಿಸಿದೆ.
ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ತಯಾರಿಸುವ ದಿಕ್ಕಿನಲ್ಲಿ ಮರುಸಂಸ್ಕರಣೆಯು ಒಂದು ಹೆಜ್ಜೆಯಾಗಿದ್ದು, ಉತ್ತರ ಕೊರಿಯ ದೂರಗಾಮಿ ರಾಕೆಟ್ ಉಡಾವಣೆ ಬಳಿಕ ತೀವ್ರ ಅಂತಾರಾಷ್ಟ್ರೀಯ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಮಾಣು ಕಾರ್ಯಕ್ರಮ ಸ್ಥಗಿತಗೊಳಿಸುವ ಮಾತುಕತೆಯನ್ನು ನಿಲ್ಲಿಸಿದೆ.
ವಿಶ್ವಸಂಸ್ಥೆ ಭದ್ರತಾಮಂಡಳಿಯು ಮೂರು ಉತ್ತರಕೊರಿಯ ಕಂಪನಿಗಳಿಗೆ ಉಡಾವಣೆಗೆ ಪ್ರತಿಕ್ರಿಯೆಯಾಗಿ ದಿಗ್ಬಂಧನಗಳನ್ನು ಹೇರಿತ್ತು. ಆದರೆ ಈ ದಿಗ್ಬಂಧನಗಳನ್ನು ಉಪೇಕ್ಷಿಸುವುದಾಗಿ ಉತ್ತರಕೊರಿಯ ತಿಳಿಸಿದ್ದು, ವಿಶ್ವಸಂಸ್ಥೆ ಶಾಸನದ ಉಲ್ಲಂಘನೆಯೆಂದು ಹೇಳಿಕೆ ನೀಡಿದೆ.
ಇದಕ್ಕೆ ಪ್ರತಿಯಾಗಿಬೃಹತ್ ಪರಮಾಣು ವಿದ್ಯುತ್ ಘಟಕದಿಂದ ಉರಿಸಿದ ಇಂಧನ ಕೊಳವೆಗಳ ಮರುಸಂಸ್ಕರಣೆಯನ್ನು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಘೋಷಿಸಿರುವಂತೆ ಆರಂಭಿಸಲಾಗಿದೆಯೆಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ತಿಳಿಸಿದರು.
ವೈರಿ ರಾಷ್ಟ್ರಗಳಿಂದ ಮಿಲಿಟರಿ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ವಯಂರಕ್ಷಣೆಗಾಗಿ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯನ್ನು ಬಲಪಡಿಸಲು ಮರುಸಂಸ್ಕರಣೆ ಕೊಡುಗೆ ನೀಡುತ್ತದೆಂದು ಅಧಿಕಾರಿ ಹೇಳಿದರು.
ಉತ್ತರಕೊರಿಯ ವಿವಾದಾತ್ಮಕ ರಾಕೆಟ್ ಉಡಾವಣೆಗೆ ಒತ್ತಾಸೆಯಾಗಿ ನಿಂತ ಮೂರು ಕಂಪೆನಿಗಳ ಮೇಲೆ ವಿಶ್ವಸಂಸ್ಥೆ ದಿಗ್ಬಂಧನಗಳನ್ನು ವಿಧಿಸಿದ ಕೆಲವೇ ಗಂಟೆಗಳಲ್ಲಿ ಪ್ಯೋಂಗ್‌ಯಾಂಗ್ ಪ್ರಕಟಣೆ ಹೊರಬಿದ್ದಿದೆ. ಉತ್ತರ ಕೊರಿಯ ತನ್ನ ರಾಕೆಟ್ ಪ್ರಯೋಗದ ಬಗ್ಗೆ ವಿವರಿಸುತ್ತಾ, ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡುವ ಉಪಗ್ರಹವನ್ನು ಉಡಾವಣೆ ಮಾಡಿದ್ದಾಗಿ ಹೇಳಿದೆ. ಆದರೆ ಅದು ದೂರಗಾಮಿ ಕ್ಷಿಪಣಿ ಪರೀಕ್ಷೆಯಾಗಿದ್ದು, ಪೆಸಿಫಿಕ್‌ನಲ್ಲಿ ಬಿತ್ತೆಂದು ಟೀಕಾಕಾರರು ಹೇಳಿದ್ದಾರೆ. |