ಕಳೆದ ತಿಂಗಳು ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದನೆ ದಾಳಿ ಕುರಿತು ತನಿಖೆ ನಡೆಸಿದ ನ್ಯಾಯಮಂಡಳಿಯೊಂದು ಪ್ರವಾಸಿ ಶ್ರೀಲಂಕಾ ತಂಡದ ರಕ್ಷಣೆಗೆ ನೇಮಿಸಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯನಿರ್ಲಕ್ಷ್ಯತೆಯಿಂದ ದುರಂತ ಘಟಿಸಿದೆಯೆಂದು ತೀರ್ಮಾನಿಸಿದೆ.
ಲಾಹೋರ್ ಹೈಕೋರ್ಟಿನ ನ್ಯಾಯಮೂರ್ತಿ ಶಾಬ್ಬಾಪ್ ರಾಜಾ ರಿಜ್ವಿ ನೇತೃತ್ವದ ವರದಿಯನ್ನು ಸರ್ಕಾರಕ್ಕೆ ಬುಧವಾರ ಸಲ್ಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳ ಅಲಕ್ಷ್ಯವೇ ದಾಳಿಯನ್ನು ತಡೆಯಲು ವಿಫಲತೆಗೆ ಮುಖ್ಯ ಕಾರಣವೆಂದು ವರದಿಯಲ್ಲಿ ಹೇಳಲಾಗಿದೆ.
ತಂಡದ ವಾಹನದ ಮೇಲೆ ಲಿಬರ್ಟಿ ವೃತ್ತದ ಬಳಿ ಸುಮಾರು 12 ಭಯೋತ್ಪಾದಕರು ದಾಳಿ ಮಾಡಿದ್ದರಿಂದ 8 ಮಂದಿ ಸತ್ತಿದ್ದರು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಟೆಸ್ಟ್ ಪಂದ್ಯದ 2 ದಿನಗಳ ಕಾಲ ಸ್ಟೇಡಿಯಂಗೆ ಶ್ರೀಲಂಕಾ ತಂಡ ಸಂಚರಿಸುವ ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳು ಸೂಕ್ತ ನಿಗಾವಹಿಸಲಿಲ್ಲ ಎಂದು ಪಂಜಾಬ್ ಪ್ರಾಂತೀಯ ಸರ್ಕಾರ ತಿಳಿಸಿದೆ.
ಲಿಬರ್ಟಿ ಸುತ್ತ ಕಟ್ಟಡಗಳ ಮೇಲೆ ಒಬ್ಬ ಪೊಲೀಸನನ್ನು ಕೂಡ ನಿಯೋಜಿಸಿರಲಿಲ್ಲ.ಸತತವಾಗಿ 3 ದಿನಗಳವರೆಗೆ ಮಾರ್ಗವನ್ನು ತಪಾಸಣೆ ಮಾಡುವ ಬಗ್ಗೆ ಅಧಿಕಾರಿಗಳು ಯೋಚಿಸಲೇ ಇಲ್ಲ ಎಂದು ಮೂಲಗಳು ಹೇಳಿವೆ. |