ತಮಿಳು ವ್ಯಾಘ್ರಗಳ ವರಿಷ್ಠ ಪ್ರಭಾಕರನ್ ಮತ್ತು ಅವನ ಸಂಗಡಿಗರು ಭದ್ರತಾಪಡೆಗಳಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆಂದು ಶ್ರೀಲಂಕಾದ ಉನ್ನತ ಕಮಾಂಡರ್ ತಿಳಿಸಿದ್ದು, ಬಂಡುಕೋರ ನಾಯಕನಿಗೆ ಶರಣಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದು ಎರಡೇ ದಾರಿ ಈಗ ಉಳಿದಿರುವುದು ಎಂದು ಹೇಳಿದ್ದಾರೆ.
ಮಾ.29-31ರ ನಡುವೆ ಪುದುಕುಡಿಯರುಪ್ಪು-ಇರ್ನಾಮಲೈ ರಸ್ತೆಯಲ್ಲಿ ಸೇನೆ ಪೂರ್ಣ ಮುತ್ತಿಗೆ ಹಾಕಲು ಎರಡು ದಿನಗಳ ಮುಂಚೆ ಪ್ರಭಾಕರನ್ ಆ ಮಾರ್ಗವಾಗಿ ಹಾದುಹೋಗಿದ್ದಾನೆಂಬ ವಿಷಯ ತಿಳಿದುಬಂದಿದ್ದಾಗಿ ಜಿಒಸಿ 58 ವಿಭಾಗದ ಬ್ರಿಗೇಡಿಯರ್ ಶವೇಂದ್ರ ಸಿಲ್ವ ತಿಳಿಸಿದ್ದಾರೆ.
ಅವನು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಇಲ್ಲದಿದ್ದರೆ ಇನ್ನಷ್ಟು ಬೇಗ ಕಾರ್ಯಾಚರಣೆ ಮುಗಿಯುತ್ತಿತ್ತು ಎಂದು ಹೇಳಿದ ಅವರು ಪ್ರಭಾಕರನ್ ರಸ್ತೆಯ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ನುಡಿದಿದ್ದಾರೆ.
ಗುಂಡು ಹಾರಾಟ ನಿಷೇಧ ವಲಯದಲ್ಲಿ ಎಲ್‌ಟಿಟಿಇ ಹದ್ದಿನ ಕಣ್ಣುಗಳಿಂದ ತನ್ನ ಮಗನನ್ನು ಪಾರು ಮಾಡಲು ಹಳ್ಳವೊಂದನ್ನು ತೋಡಿ ಅದರಲ್ಲಿ ಮಗನನ್ನು ಹುದುಗಿಸಿಟ್ಟು ಮೇಲೆ ಅಡುಗೆಯ ಒಲೆಯನ್ನು ಮಹಿಳೆಯೊಬ್ಬಳು ಉರಿಸಿದ್ದಳೆಂದು ಸಿಲ್ವ ಹೇಳಿದ್ದಾರೆ.
ಸೀ ಟೈಗರ್ ನಾಯಕ ಸೂಸೈ, ಎಲ್‌ಟಿಟಿಇ ಸೇನಾ ಮುಖ್ಯಸ್ಥ ಪೊಟ್ಟು ಅಮ್ಮನ್ ಮತ್ತು ಪ್ರಭಾಕರನ್ ಪುತ್ರ ಚಾರ್ಲ್ಸ್ ಅಂತೋನಿ ಮಾತ್ರ ಪ್ರಭಾಕರನ್ ಜತೆ ಉಳಿದಿದ್ದಾರೆಂದು ತನಿಖೆಯ ಸಂದರ್ಭದಲ್ಲಿ ಎಲ್‌ಟಿಟಿಇ ನಾಯಕ ದಯಾ ಮಾಸ್ಕರ್ ಹೇಳಿದ್ದಾನೆ. |