ಶ್ರೀಲಂಕಾದ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ಸುಮಾರು 50,000 ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ ವಿಶ್ವಸಂಸ್ಥೆಯ ಉನ್ನತ ಮಾನವೀಯ ಅಧಿಕಾರಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ.
ಕಳೆದ ವರ್ಷ ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನ ಆರಂಭವಾದ ಬಳಿಕ, ಈ ಪ್ರದೇಶದಲ್ಲಿ ನೆರವು ಕಾರ್ಯಕರ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.
ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಅಧೀನ ಪ್ರಧಾನಕಾರ್ಯದರ್ಶಿ ಜಾನ್ ಹೋಮ್ಸ್ ದ್ವೀಪಕ್ಕೆ ತಮ್ಮ ಮೂರು ದಿನಗಳ ಪ್ರವಾಸವನ್ನು ಆರಂಭಿಸಿದ್ದು, ಎಲ್‌ಟಿಟಿಇ ವಿರುದ್ಧ ಕದನ ನಿಲ್ಲಿಸಿ, ಮಾನವೀಯ ನೆರವಿನ ತಂಡಕ್ಕೆ ಸಂಘರ್ಷ ವಲಯದಲ್ಲಿ ಅವಕಾಶ ನೀಡಲು ಶ್ರೀಲಂಕಾ ಸರ್ಕಾರವನ್ನು ಮನವೊಲಿಸುವ ವಿಶ್ವಾಸವನ್ನು ಹೊಂದಿದ್ದಾರೆ.ಕದನವಲಯದಲ್ಲಿ ಸಿಕ್ಕಿಬಿದ್ದ ನಾಗರಿಕರು ಅತೀವ ಸಾವುನೋವಿಗೆ ಗುರಿಯಾಗಿದ್ದು, ಆಹಾರ, ಸ್ವಚ್ಛ ನೀರು ಮತ್ತು ವೈದ್ಯಕೀಯ ಪೂರೈಕೆಯ ಕೊರತೆಯಿಂದ ನರಳುತ್ತಿದ್ದಾರೆಂದು ಅವರು ಶುಕ್ರವಾರ ತಿಳಿಸಿದರು.
ಕಳೆದ ಮೂರು ತಿಂಗಳ ಹೋರಾಟದಲ್ಲಿ ಸುಮಾರು 6500 ನಾಗರಿಕರು ಸತ್ತಿದ್ದಾರೆಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲಿನ ಪರಿಸ್ಥಿತಿ ದಾರುಣವಾಗಿದ್ದು, ಆದ್ದರಿಂದಲೇ ಯುದ್ಧವನ್ನು ನಿಲ್ಲಿಸಿ ನಾಗರಿಕರ ಜೀವರಕ್ಷಣೆ ಮಾಡುವುದರಿಂದ ಅವರನ್ನು ಸೂಕ್ತವಾಗಿ ಆರೈಕೆ ಮಾಡಬಹುದು ಎಂದು ಶ್ರೀಲಂಕಾಗೆ ತೆರಳುವ ಮಾರ್ಗದಲ್ಲಿ ಥಾಯ್ಲಿಂಡ್‌ನಲ್ಲಿ ಅವರು ತಿಳಿಸಿದ್ದಾರೆ. |