ತಾಲಿಬಾನ್ ಉಗ್ರಗಾಮಿಗಳು ರಾಜಧಾನಿ ಇಸ್ಲಾಮಾಬಾದ್‌ಗೆ ಒಳನುಗ್ಗುವುದನ್ನು ತಡೆಯಲು ಪಾಕಿಸ್ತಾನ ವಿಫಲವಾದರೆ ಸ್ವಾತ್ ಕಣಿವೆಯಲ್ಲಿ ಮಿಲಿಟರಿ ದಾಳಿ ನಡೆಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.
ಏತನ್ಮಧ್ಯೆ, ಸ್ವಾತ್ ಕಣಿವೆಯಲ್ಲಿ ಕಾರ್ಯಾಚರಣೆ ವಿರುದ್ಧ ತಾಲಿಬಾನ್ ಪಾಕಿಸ್ತಾನ ಸೇನೆಗೆ ಎಚ್ಚರಿಕೆ ನೀಡಿದೆ. ಉಗ್ರಗಾಮಿಗಳು ಇಸ್ಲಾಮಾಬಾದ್‌ಗೆ ಅತೀ ಸಮೀಪವಿರುವ, ಎರಡು ಪರಮಾಣು ಸೌಲಭ್ಯಗಳಿಗೆ ತಾಣವಾದ ಹರಿಪುರಕ್ಕೆ ಲಗ್ಗೆ ಹಾಕಲು ಹೊಂಚು ಹಾಕುತ್ತಿದೆಯೆಂದು ಕೂಡ ವರದಿಯಾಗಿದೆ.
ಇದರಿಂದಾಗಿ ತಾಲಿಬಾನ್ ಹೋರಾಟಗಾರರನ್ನು ಶೀಘ್ರದಲ್ಲೇ ಸೋಲಿಸದಿದ್ದರೆ ದೇಶದ ಅಣ್ವಸ್ತ್ರ ಅವರ ಕೈಗೆ ಸಿಗಬಹುದೆಂಬ ಭಯ ಆವರಿಸಿದೆ. ತಾಲಿಬಾನ್ ಪಾಕಿಸ್ತಾನದಲ್ಲಿ ನಿಯಂತ್ರಣ ಸಾಧಿಸುತ್ತಿದೆಯೆಂಬ ವರದಿಗಳ ನಡುವೆ, ಆ ರೀತಿಯ ವಿದ್ಯಮಾನಕ್ಕೆ ಅವಕಾಶ ತೀರಾ ಕಡಿಮೆಯಾಗಿದೆ ಎಂದು ಮೂಲಗಳು ಹೇಳಿದೆ. ಮಾಜಿ ಉಪ ಮಾಹಿತಿ ಸಚಿವ ತಾರಿಖ್ ಅಜೀಜ್ ಕೂಡ ಈ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ.
ಆದರೆ ಅವರ ದೃಷ್ಟಿಕೋನವನ್ನು ಕೆಲವರು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ತಾಲಿಬಾನ್ ವಿರುದ್ಧ ಹೋರಾಟಕ್ಕೆ ಪಾಕಿಸ್ತಾನದ ಬಳಿ ಅಗತ್ಯ ಮಿಲಿಟರಿ ಸಾಮರ್ಥ್ಯವಿಲ್ಲವೆಂದು ಭಾರತದ ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ಬುನೇರ್ ಜಿಲ್ಲೆಯಲ್ಲಿ ಇನ್ನೂ ನೆಲೆನಿಂತಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ. |