ಸೋಲಿನ ಅಂಚಿನಲ್ಲಿರುವ ಎಲ್‌ಟಿಟಿಇ ಭಾನುವಾರ ಏಕಪಕ್ಷೀಯವಾಗಿ ಕದನವಿರಾಮ ಘೋಷಿಸಿದ್ದು, ಶ್ರೀಲಂಕಾದ ಯುದ್ಧವಲಯದಲ್ಲಿ ಮಾನವೀಯ ನೆಲೆಯ ಬಿಕ್ಕಟ್ಟನ್ನು ಕದನವಿರಾಮದಿಂದ ಮಾತ್ರ ನಿವಾರಿಸಬಹುದೆಂದು ಹೇಳಿದೆ.
ಆದರೆ ಸರ್ಕಾರವು ಎಲ್‌ಟಿಟಿಇ ಮಂಡಿಸಿದ ಕದನವಿರಾಮದ ಪ್ರಸ್ತಾಪವನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಬಂಡುಕೋರರಿಗೆ ಶರಣಾಗುವಂತೆ ಆದೇಶ ನೀಡಿದೆ. ಹಿಂದೆಂದೂ ಕಾಣದ ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತು ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ. ಅಮೆರಿಕ, ಭಾರತ ಮತ್ತಿತರ ರಾಷ್ಟ್ರಗಳ ಕರೆಯ ಹಿನ್ನೆಲೆಯಲ್ಲಿ ಕದನವಿರಾಮ ಘೋಷಿಸಿದ್ದಾಗಿ ಎಲ್‌ಟಿಟಿಇ ತಿಳಿಸಿದೆ.
ಎಲ್‌ಟಿಟಿಇಯ ಮಿಲಿಟರಿ ಕಾರ್ಯಾಚರಣೆ ತಕ್ಷಣಕ್ಕೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ನಾವು ಕೈಗೊಂಡ ಮೊದಲ ಹೆಜ್ಜೆ ಕದನವಿರಾಮ ಘೋಷಣೆಯಾಗಿದ್ದು, ಅದನ್ನು ಅನುಸರಿಸುವಂತೆ ಶ್ರೀಲಂಕಾ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕೆಂದು ತಿಳಿಸಿದೆ.
ತಮಿಳು ವ್ಯಾಘ್ರಗಳ ಕದನವಿರಾಮ ಒಪ್ಪಂದಕ್ಕೆ ರಕ್ಷಣಾ ಕಾರ್ಯದರ್ಶಿ ಗೊತಾಬಾಯಾ ರಾಜಪಕ್ಷ ಪ್ರತಿಕ್ರಿಯಿಸಿ, ಎಲ್‌ಟಿಟಿಇ ಜತೆ ಕದನವಿರಾಮ ಒಪ್ಪಂದದ ಪ್ರಶ್ನೆಯೇ ಇಲ್ಲವೆಂದು ತಳ್ಳಿಹಾಕಿದ್ದಾರೆ. ಅದು ಶರಣಾಗಬೇಕು ಅಥವಾ ನಾಶವಾಗಬೇಕು ಎಂದು ಅವರು ಖಾರವಾಗಿ ನುಡಿದಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಪಲಿತಾ ಕೊಹನಾ ಇದೊಂದು ನಂಬಲಾರದ ಜೋಕ್‌ನಂತಿದೆಯೆಂದು ಹೇಳಿದ್ದಾರೆ. ಅವರು ಮಂಡಿಯೂರಿ ಕುಳಿತು ಕದನವಿರಾಮ ಘೋಷಿಸಿದರೆ ಅವರನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಾರೆಂದು ಅವರು ಪ್ರಶ್ನಿಸಿದ್ದಾರೆ. |