ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರಗಾಮಿಗಳು ಸರ್ಕಾರವನ್ನು ಉರುಳಿಸಿ ಅಣ್ವಸ್ತ್ರದ ಕೀಲಿಕೈಯನ್ನು ಸುಪರ್ದಿಗೆ ತೆಗೆದುಕೊಳ್ಳುವ ಊಹಿಸಲಸಾಧ್ಯವಾದ ಸಂಗತಿ ನಡೆಯಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆತಂಕ ವ್ಯಕ್ತಪಡಿಸಿದ್ದಾರೆ.
ಬಾಗ್ದಾದ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಅಮೆರಿಕ ಇದಕ್ಕೆ ಅವಕಾಶ ನೀಡದಿರುವ ಸಲುವಾಗಿ ರಾಷ್ಟ್ರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರವೊಂದನ್ನು ರೂಪಿಸುವಂತೆ ತಾವು ಪಾಕಿಸ್ತಾನಿಯರಿಗೆ ತೀವ್ರ ಒತ್ತಡ ಹಾಕುತ್ತಿರುವುದಾಗಿ ಅವರು ನುಡಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಚುನಾವಣೆ ರ‌್ಯಾಲಿಯೊಂದರಲ್ಲಿ ಪಾಕಿಸ್ತಾನದ ಅಣ್ವಸ್ತ್ರಗಳು ಸುರಕ್ಷಿತವಾಗಿದೆಯೆಂದು ಭರವಸೆ ಸಿಕ್ಕಿದೆಯೆಂದು ಘೋಷಿಸಿದ ಕೆಲವೇ ದಿನಗಳಲ್ಲಿ ಕ್ಲಿಂಟನ್ ಹೇಳಿಕೆಯು ಭಾರತದಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಅಣ್ವಸ್ತ್ರಗಳು ಉಗ್ರಗಾಮಿಗಳ ಕೈಗೆ ಸಿಗಬಹುದೆಂದು ಬಿಜೆಪಿ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಂಗ್ ಹೇಳಿಕೆ ನೀಡಿ, ಪಾಕಿಸ್ತಾನದ ಅಣ್ವಸ್ತ್ರಗಳು ಸುರಕ್ಷಿತ ಕೈಯಲ್ಲಿದ್ದು, ಭರವಸೆ ನಂಬದಿರಲು ಕಾರಣವಿಲ್ಲ ಎಂದು ಹೇಳಿದ್ದರು. ಆದರೆ ಭರವಸೆ ನೀಡಿದ ಮೂಲವನ್ನು ಸಿಂಗ್ ಹೆಸರಿಸದಿದ್ದರೂ ಅಮೆರಿಕದ ಉನ್ನತ ಮಟ್ಟದ ಮೂಲದಿಂದ ಭರವಸೆ ಸಿಕ್ಕಿದೆಯೆಂದು ಸ್ಪಷ್ಟವಾಗಿದೆ.
ಪ್ರಧಾನಮಂತ್ರಿ ಅಮೆರಿಕದ ಅಧ್ಯಕ್ಷ ಒಬಾಮಾ ಅವರನ್ನು ಲಂಡನ್‌ನಲ್ಲಿ ಇತ್ತೀಚೆಗೆ ಭೇಟಿಯಾಗಿದ್ದು, ಪಾಕಿಸ್ತಾನವು ಚರ್ಚೆಯ ವಸ್ತುವಾಗಿತ್ತೆಂದು ಅಧಿಕಾರಿಗಳು ಹೇಳಿದ್ದರು. ಪಾಕಿಸ್ತಾನ ಹೊರತುಪಡಿಸಿ, ಅದರ ಅಣ್ವಸ್ತ್ರಗಳ ಬಗ್ಗೆ ನಿಕಟ ಜ್ಞಾನವಿರುವುದು ಅಮೆರಿಕಕ್ಕೆ ಮಾತ್ರವೆಂದು ಭಾರತೀಯ ಅಧಿಕಾರಿಗಳು ಹೇಳುತ್ತಾರೆ.
ಅಮೆರಿಕವನ್ನು ಪಾಕ್ ಅಣ್ವಸ್ತ್ರಗಳ ಭದ್ರತೆ ಕುರಿತು ಕೇಳಿದಾಗಲೆಲ್ಲ ಪಾಕ್ ಅಣ್ವಸ್ತ್ರಗಳು ಸುರಕ್ಷಿತವಾಗಿವೆಯೆಂದು ಅಮೆರಿಕ ಆತ್ಮವಿಶ್ವಾಸದಿಂದ ಹೇಳುತ್ತಿತ್ತು. ಆದರೆ ಅಣ್ವಸ್ತ್ರಗಳು ರಾಷ್ಟ್ರಾದ್ಯಂತ ಹರಡುವ ಅಪಾಯವಿದೆ ಎಂದು ಕ್ಲಿಂಟನ್ ಹೇಳುವ ಮೂಲಕ ಆತಂಕದ ಛಾಯೆ ಕವಿದಿದೆ. |