ಎಲ್‌ಟಿಟಿಇ ವಿರುದ್ಧ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಸೋಮವಾರ ಘೋಷಿಸಿದೆ.
ಎಲ್‌ಟಿಟಿಇ ವಿರುದ್ಧ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವ ಲಂಕಾ ಸರ್ಕಾರ, ದ್ವೀಪರಾಷ್ಟ್ರದ ಉತ್ತರದ ಬಹುತೇಕ ಭಾಗದಲ್ಲಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಅಂತಿ ಗುರಿ ತಲುಪಿದ್ದು, ಇದೀಗ ಆ ಭಾಗದಲ್ಲಿ ಯಾವುದೇ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ದಾಳಿಯನ್ನು ಮುಂದುವರಿಸದಂತೆ ಸೇನೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ.
ಎಲ್‌ಟಿಟಿಇಯಿಂದ ಒತ್ತೆಯಾಳಾಗಿರುವ ಹಾಗೂ ಬಂಧಿಯಾಗಿರುವ ತಮಿಳು ನಾಗರಿಕರ ರಕ್ಷಣಾ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿರುವ ಲಂಕಾ ಸರ್ಕಾರ, ತಮಿಳು ನಾಗರಿಕರ ರಕ್ಷಣೆಗೆ ಪ್ರಮುಖ ಆದ್ಯತೆ ನೀಡುವುದಾಗಿ ಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಅವರ ಕಚೇರಿಯ ಪ್ರಕಟಣೆ ಅಧಿಕೃತವಾಗಿ ತಿಳಿಸಿದೆ.
ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ ವಿರುದ್ಧ ಲಂಕಾ ಸೇನೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಎಲ್‌ಟಿಟಇ ಭಾನುವಾರ ಮನವಿ ಮಾಡಿಕೊಂಡಿತ್ತು. ಆದರೆ ಲಂಕಾ ಸರ್ಕಾರ ಆ ಬೇಡಿಕೆಯನ್ನು ತಿರಸ್ಕರಿಸಿತ್ತು. ಯಾವುದೇ ಕಾರಣಕ್ಕೂ ಎಲ್‌ಟಿಟಿಇ ವಿರುದ್ಧದ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ, ಕದನವಿರಾಮ ಘೋಷಣೆ ಎಲ್‌ಟಿಟಿಇ ಸಮಯಾವಕಾಶ ಪಡೆಯುವ ಹುನ್ನಾರ ಎಂದು ಸರ್ಕಾರ ಹೇಳಿತ್ತು.
ಶ್ರೀಲಂಕಾ ಸರ್ಕಾರ ಎಲ್‌ಟಿಟಿಇ ವಿರುದ್ಧ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕುರಣಾನಿಧಿ ಕೂಡ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಲಂಕಾದಲ್ಲಿ ತಮಿಳು ನಾಗರಿಕರ ರಕ್ಷಣೆ ಕುರಿತು ಮಾತುಕತೆ ನಡೆಸುವುದಾಗಿ ಗೃಹಸಚಿವ ಪಿ.ಚಿದಂಬರಂ ಆಶ್ವಾಸನೆ ನೀಡಿದ ಕಾರಣ ಕರುಣಾನಿಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು. ಕಾಕತಾಳೀಯ ಎಂಬಂತೆ ಶ್ರೀಲಂಕಾ ಕೂಡ ಎಲ್‌ಟಿಟಿಇ ವಿರುದ್ಧ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. |