ಪೋಲೆಂಡ್‌ಗೆ ತಮ್ಮ ಅಧಿಕೃತ ಪ್ರವಾಸದ ಕಡೆಯ ದಿನ ರಾಷ್ಟ್ರಪತಿ ಪ್ರತಿಭಾಪಾಟೀಲ್ ನಾಜಿ ಚಿತ್ರಹಿಂಸೆ ಶಿಬಿರಕ್ಕೆ ಭೇಟಿ ನೀಡಿದ್ದು, ನಾಜಿ ಶಿಬಿರದ ವಿಷಾನಿಲ ಚೇಂಬರ್ ವೀಕ್ಷಿಸಿದ ಬಳಿಕ ರಾಷ್ಟ್ರಪತಿ ತೀವ್ರ ಭಾವಪರವಶತೆಗೆ ಒಳಗಾದರು.
ನಾಜಿ ಶಿಬಿರದಲ್ಲಿ ಸಾವಿರಾರು ಪೋಲೆಂಡ್ ನಾಗರಿಕರನ್ನು ಚಿತ್ರಹಿಂಸೆಗೆ ಗುರಿಮಾಡಿ ಕೊಲ್ಲಲಾಗಿತ್ತು. ಪ್ರತಿಭಾಪಾಟೀಲ್ ಮೃತರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ನಾಜಿ ಬಂಧೀಖಾನೆ ಶಿಬಿರಗಳಲ್ಲಿ ಜನರನ್ನು ಹಿಂಸಿಸುತ್ತಿದ್ದ ವಿಧಾನವು ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದ್ದು ಅದನ್ನು ಮರೆಯಲು ಸಾಧ್ಯವಿಲ್ಲವೆಂದು ಹೇಳಿದರು.
ಅಂತಹ ಚಿತ್ರಹಿಂಸೆ ಅನುಭವಿಸಿ ಪ್ರಾಣತ್ಯಾಗ ಮಾಡಿದ ವ್ಯಕ್ತಿಗಳು ಮಹಾನ್ ಪುರುಷರು ಎಂದು ರಾಷ್ಟ್ರಪತಿ ಹೇಳಿದರು. ಯಾವುದೇ ಸಮಸ್ಯೆಯನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಬಹುದೆಂದು ಹೇಳಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಸ್ಮರಿಸಿದರು. ಅವರ ತತ್ವಗಳಾದ ಅಹಿಂಸೆ ಮತ್ತು ಮಾನವೀಯತೆಗೆ ಪುನಶ್ಚೇತನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಪಾಟೀಲ್ ಹೇಳಿದರು. |