ಉಗ್ರಗಾಮಿಗಳ ನಿಗ್ರಹಕ್ಕೆ ಪಾಕಿಸ್ತಾನ ಸರ್ಕಾರ ದಿರ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದನ್ನು ಪ್ರತಿಭಟಿಸಿ ತಾಲಿಬಾನಿಗಳು ಸ್ವಾತ್ ಒಪ್ಪಂದ ಕುರಿತು ಸರ್ಕಾರದ ಜತೆ ಮಾತುಕತೆ ಸ್ಥಗಿತಗೊಳಿಸಿದೆ.
ದಿರ್‌ನಲ್ಲಿ ಪಾಕ್ ಸರ್ಕಾರ ನಡೆಸಿದ ಕಾರ್ಯಾಚರಣೆಯಲ್ಲಿ ಇದುವರೆಗೆ 30 ಉಗ್ರಗಾಮಿಗಳು ಮತ್ತು ಸೇನಾಧಿಕಾರಿ ಹತರಾಗಿದ್ದಾರೆ. ಎರಡನೇ ದಿನವಾದ ಸೋಮವಾರ ಕೂಡ ಪಾಕಿಸ್ತಾನ ಸರ್ಕಾರ ದಿರ್‌ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ನಡುವೆ, ಭದ್ರತಾ ಪಡೆಗಳು ಕಾರ್ಯಾಚರಣೆ ಮುಗಿಸುವ ತನಕ ಸರ್ಕಾರದ ಜತೆ ಶಾಂತಿಮಾತುಕತೆಯಿಲ್ಲ ಎಂದು ತೆಹ್ರಿಕೆ ನಿಫಾಜೆ ಷರಿಯ ಮುಹಮ್ಮದಿ ವಕ್ತಾರ ಇಜ್ಜಾತ್ ಖಾನ್ ಹೇಳಿದ್ದಾನೆ.
ಏನೇ ಆದರೂ ಉಗ್ರಗಾಮಿಗಳು ಶಸ್ತ್ರಾಸ್ತ್ರ ತ್ಯಜಿಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಖಡಾಖಂಡಿತವಾಗಿ ಹೇಳಿದ್ದಾನೆ. ಸ್ವಾತ್ ಶಾಂತಿ ಒಪ್ಪಂದದಲ್ಲಿ ಇಸ್ಲಾಮಿಕ್ ಷರಿಯತ್ ಕಾನೂನು ಜಾರಿ ಮಾಡುವ ಬೇಡಿಕೆ ಜಾರಿಗೆ ತಂದ ಬಳಿಕ ಉಗ್ರಗಾಮಿಗಳು ಶಸ್ತ್ರಾಸ್ತ್ರ ತ್ಯಜಿಸುತ್ತಾರೆಂದು ನಿಗದಿಯಾಗಿತ್ತು.
ಆದರೆ ತಾಲಿಬಾನ್ ಪಾಕಿಸ್ತಾನದ ವಿವಿಧ ನಗರಗಳ ಮೇಲೆ ದಾಳಿಗೆ ಯೋಜಿಸಿದ ವರದಿಗಳು ಪ್ರಕಟವಾದ ಬಳಿಕ ಸರ್ಕಾರ ಕಾರ್ಯಾಚರಣೆ ಆರಂಭಿಸಿದ್ದು, ದಿರ್ ಜಿಲ್ಲೆಯಲ್ಲಿ ಉಗ್ರರ ಅಡಗುತಾಣಗಳ ಮೇಲೆ ಶೆಲ್ ದಾಳಿಯನ್ನು ಮುಂದುವರಿಸಿದೆ.
ಕಾರ್ಯಾಚರಣೆ ವೇಳೆ ಸುಮಾರು 30 ಉಗ್ರಗಾಮಿಗಳನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆಯೆಂದು ಒಳಾಡಳಿತ ಸಚಿವಾಲಯದ ಮುಖ್ಯಸ್ಥ ರೆಹಮಾನ್ ಮಲಿಕ್ ತಿಳಿಸಿದ್ದಾರೆ. ಸ್ವಾತ್ ಕಣಿವೆಯ ಹೊರಕ್ಕೆ ಪ್ರಭಾವ ವಿಸ್ತರಣೆಗೆ ತಾಲಿಬಾನ್ ಯತ್ನಿಸುತ್ತಿರುವುದಕ್ಕೆ ಪ್ರತೀಕಾರವಾಗಿ ಸರ್ಕಾರ ಕಾರ್ಯಾಚರಣೆ ನಡೆಸಿದೆ. |