ಎಲ್‌ಟಿಟಿಇ ವಿರುದ್ಧ ತಾತ್ಕಾಲಿಕ ಕದನವಿರಾಮ ಘೋಷಿಸಿರುವ ವರದಿಯನ್ನು ಅಲ್ಲಗಳೆದಿರುವ ಶ್ರೀಲಂಕಾ ಕದನವಿರಾಮ ಘೋಷಿಸಿಯೇ ಇಲ್ಲವೆಂದು ಅಧ್ಯಕ್ಷ ಮಹೀಂದ ರಾಜಪಕ್ಸೆ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಯುದ್ಧವಲಯದಲ್ಲಿ ಸಿಕ್ಕಿಹಾಕಿಕೊಂಡ ಸಾವಿರಾರು ನಾಗರಿಕರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಅಧಿಕ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಮಾತ್ರ ಬಳಸುವುದಿಲ್ಲವೆಂದು ಅದು ಹೇಳಿದೆ. ಭದ್ರತಾ ಪಡೆಗಳು ಗೆಲುವಿನ ಅಂಚಿನಲ್ಲಿದ್ದು, ಕದನವಿರಾಮ ಘೋಷಿಸುವ ಮೂಲಕ ಎಲ್‌ಟಿಟಿಇಗೆ ಉಸಿರಾಡಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.
'ಗುಂಡು ಹಾರಾಟ ನಿಷೇಧ ವಲಯದಿಂದ ಎಲ್‌ಟಿಟಿಇ ಒತ್ತೆಯಾಳಾಗಿ ಇರಿಸಿಕೊಂಡ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಸರ್ಕಾರ ಮುಂದುವರಿಸುವುದು' ಎಂದು ಮಾಧ್ಯಮ ಕೇಂದ್ರದ ಪ್ರಧಾನ ನಿರ್ದೇಶಕ ಲಕ್ಷ್ಮಣ ಹುಲ್ಲಾಗುಲ್ಲೆ ತಿಳಿಸಿದ್ದಾರೆ.
ನಾಗರಿಕರ ಸಾವುನೋವಿಗೆ ಕಾರಣವಾಗುವ ಅಧಿಕ ಸಾಮರ್ಥ್ಯದ ಬಂದೂಕುಗಳನ್ನು, ಸಮರವಿಮಾನಗಳನ್ನು ಮತ್ತು ವೈಮಾನಿಕ ಅಸ್ತ್ರಗಳನ್ನು ಬಳಸದಂತೆ ಭದ್ರತಾಪಡೆಗಳಿಗೆ ಸರ್ಕಾರ ಸೂಚನೆ ನೀಡಿರುವುದಾಗಿ ಅವರು ಹೇಳಿದರು. ಸರ್ಕಾರ ಕದನವಿರಾಮ ಘೋಷಿಸಿರುವ ಮಾಧ್ಯಮದ ವರದಿಗಳನ್ನು ಹಿರಿಯ ಅಧಿಕಾರಿಯೊಬ್ಬರು ಕೂಡ ನಿರಾಕರಿಸಿದ್ದಾರೆ.
ಎಲ್‌ಟಿಟಿಇ ವಿರುದ್ಧ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಕುರಿತಂತೆ ತಾತ್ಕಾಲಿಕವಾಗಿ ಶ್ರೀಲಂಕಾ ಕದನ ವಿರಾಮ ಘೋಷಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿತ್ತು. ಆದರೆ ಎಲ್‌ಟಿಟಿಇ ವಿರುದ್ಧ ನಾವು ಕದನ ವಿರಾಮ ಘೋಷಿಸಿಲ್ಲ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಬಳಸದಂತೆ ಮಿಲಿಟರಿಗೆ ಸೂಚನೆ ನೀಡಲಾಗಿರುವುದಾಗಿ ಇದೀಗ ಲಂಕಾ ಸ್ಪಷ್ಟನೆ ನೀಡಿದೆ. |