2008ರಲ್ಲಿ ಕಾರ್ಟೋಮ್ ಮೇಲೆ ದಾಳಿ ಮಾಡಿದ 11 ಮಂದಿ ಡಾರ್ಫರ್ ಬಂಡುಕೋರರಿಗೆ ಸೂಡಾನ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಸೂಡಾನ್ ರಾಜಧಾನಿಯಲ್ಲಿ ನಡೆದ ದಾಳಿಯಲ್ಲಿ ನ್ಯಾಯ ಮತ್ತು ಸಮಾನತೆ ಆಂದೋಳನದ(ಜೆಮ್)ದ ಕಾರ್ಯಕರ್ತರು ತಪ್ಪಿತಸ್ಥರೆಂದು ಕಂಡುಬಂದಿದೆ.
ಸುಮಾರು 80 ಮಂದಿ ಜೆಮ್ ಸದಸ್ಯರಿಗೆ ದಾಳಿ ಹಿನ್ನೆಲೆಯಲ್ಲಿ ಈಗಾಗಲೇ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಜೆಮ್ ಹೋರಾಟಗಾರರು ಮರಳುಗಾಡನ್ನು ದಾಟಿ ಕಾರ್ಟೋಮ್ ಮುಟ್ಟಿದಾಗ ಅವರನ್ನು ಅಧ್ಯಕ್ಷೀಯ ಅರಮನೆ ಬಳಿ ತಡೆಯಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಕಾರ್ಟೋಮ್ ಕೋರ್ಟ್‌ನಲ್ಲಿ ನ್ಯಾಯಾಧೀಶರು 11 ಬಂಡುಕೋರರನ್ನು ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.
ಜನರಲ್ಲಿ ಭಯ ಹುಟ್ಟಿಸುವ ಮೂಲಕ ರಾಷ್ಟ್ರದ ಅಡಿಪಾಯಕ್ಕೆ ಬೆದರಿಕೆ ಒಡ್ಡಿದ್ದರಿಂದ ಅವರಿಗೆ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಇನ್ನೂ 8 ಜನರನ್ನು ದೋಷಮುಕ್ತಗೊಳಿಸಲಾಗಿದೆ.ಜೆಮ್ ಪ್ರಸಕ್ತ ಅತ್ಯಂತ ಗಮನಾರ್ಹ ಬಂಡುಕೋರ ಪಡೆಯಾಗಿದ್ದು, ದೋಹಾದಲ್ಲಿ ಸೂಡಾನ್ ಸರ್ಕಾರದ ಜತೆ ಮಾತುಕತೆಯಲ್ಲಿ ಶಾಂತಿಯುತ ಇತ್ಯರ್ಥದ ಘೋಷಣೆಗೆ ಜೆಮ್ ಸಹಿ ಹಾಕಿತ್ತು. ಆದರೆ ವಿಶ್ವಾಸ ನಿರ್ಮಾಣದ ಒಪ್ಪಂದಗಳಿಗೆ ಸರ್ಕಾರ ಗೌರವಿಸದಿರುವ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆಗೆ ಹಿಂದಿರುಗಲು ಜೆಮ್ ನಿರಾಕರಿಸುತ್ತಿದೆ. |