ಶ್ರೀಲಂಕಾ ಸರ್ಕಾರ ಯುದ್ಧವಲಯದಲ್ಲಿ ಮಿಲಿಟರಿ ಕಾರ್ಯಾಚರಣೆಯ ತೀಕ್ಷ್ಣತೆಯನ್ನು ತಗ್ಗಿಸಿರುವ ನಡುವೆ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ದ್ವೀಪದಿಂದ ತಪ್ಪಿಸಿಕೊಳ್ಳದಂತೆ ತಡೆಯಲು ದೃಢಸಂಕಲ್ಪ ಮಾಡಿರುವುದಾಗಿ ಸರ್ಕಾರ ತಿಳಿಸಿದೆ.
ಎಲ್‌ಟಿಟಿಇ ಅವಶೇಷಗಳು ಮತ್ತು ಅದರ ನಾಯಕರು ಅಡಗಿರುವ ಮುಲ್ಲೈತಿವು ತೀರದ ಎದುರಿಗಿರುವ ಇಡೀ ಸಮುದ್ರ ಪ್ರದೇಶದಲ್ಲಿ ನೌಕಾಗಸ್ತನ್ನು ಸರ್ಕಾರ ಹೆಚ್ಚಿಸಿದೆ. ಮಿಲಿಟರಿಯಿಂದ ಸಜೀವ ಸೆರೆಸಿಗುವುದಿಲ್ಲ ಎಂದು ಪ್ರಭಾಕರನ್ ಪಣತೊಟ್ಟಿರುವ ನಡುವೆ, ಪ್ರಭಾಕರನ್ ತಪ್ಪಿಸಿಕೊಳ್ಳುವುದನ್ನು ತಡೆಯಲು ಶ್ರೀಲಂಕಾ ಹರಸಾಹಸ ಮಾಡುತ್ತಿದೆ.
ಪ್ರಭಾಕರನ್ ಆಟ ಮುಗಿಯಿತು ಎಂದು ಪ್ರತಿಪಾದಿಸಿರುವ ಸರ್ಕಾರ, ಪ್ರಭಾಕರನ್ ಮತ್ತು ಅವನ ನಿಕಟ ಬಂಟರು ತಪ್ಪಿಸಿಕೊಳ್ಳದಂತೆ ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. 'ನಾವು ಅವನು ದೋಣಿಯಿಂದ ಕೂಡ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಅವನ ಆಟ ಮುಗಿಯಿತು. ಅವನು ಗುಂಡು ಹಾರಾಟ ನಿಷೇಧ ಪ್ರದೇಶದಲ್ಲಿದ್ದಾನೆ' ಎಂದು ನೌಕಾಧಿಕಾರಿ ತಿಳಿಸಿದ್ದಾರೆ.
ತೀವ್ರ ದಾಳಿಯ ನೌಕೆ, ಸ್ಪೀಡ್ ಬೋಟ್‌ಗಳು, ರಡಾರ್‌ಗಳು ಮತ್ತಿತರ ಉಪಕರಣಗಳಿಂದ ತಮಿಳು ವ್ಯಾಘ್ರಗಳು ತಪ್ಪಿಸಿಕೊಳ್ಳದಂತೆ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಮುನ್ನುಗ್ಗುತ್ತಿರುವ ಲಂಕಾ ಪಡೆಗಳ ಮೇಲೆ ಉಳಿದ ಎಲ್ಟಿಟಿಇ ಕಾರ್ಯಕರ್ತರು ಹತಾಶ ದಾಳಿ ನಡೆಸದಂತೆ ಭದ್ರವಾದ ನೌಕಾತಡೆಯನ್ನು ಕೂಡ ನಿಯೋಜಿಸಲಾಗಿದೆಯೆಂದು ಲಂಕಾ ಅಧಿಕಾರಿ ತಿಳಿಸಿದ್ದಾರೆ. |