ಶ್ರೀಲಂಕಾದ ಉತ್ತರ ಕದನವಲಯದಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ನಡುವೆ, ದ್ವೀಪರಾಷ್ಟ್ರದಲ್ಲಿ ಪರಿಸ್ಥಿತಿಯ ಪರಾಮರ್ಶೆಗೆ ಅಂತರಏಜನ್ಸಿ ಸಭೆಯೊಂದನ್ನು ಒಬಾಮಾ ಆಡಳಿತ ಇತ್ತೀಚೆಗೆ ನಡೆಸಿದೆ.
ಕಳೆದ ವಾರದ ಕೊನೆಯಲ್ಲಿ ಜರುಗಿದ ಅಂತರ ಏಜನ್ಸಿ ಸಭೆಯಲ್ಲಿ ವಿದೇಶಾಂಗ ಇಲಾಖೆ, ಪೆಂಟಾಗನ್, ರಾಷ್ಟ್ರೀಯ ಭದ್ರತಾ ಮಂಡಳಿ, ಯುಎನ್‌ಎಐಡಿ ಮತ್ತು ವಿವಿಧ ಏಜನ್ಸಿಗಳು ಪಾಲ್ಗೊಂಡಿದ್ದವೆಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿರುವ ಸಂಕೇತವಾಗಿದೆಯೆಂದು ಈ ಸಭೆಗೆ ನಿಕಟ ಸಂಪರ್ಕವಿರುವ ಅಧಿಕಾರಿಗಳು ಹೇಳಿದ್ದಾರೆ.ಅಮೆರಿಕ ಅಧ್ಯಕ್ಷ ಒಬಾಮಾ ಶ್ರೀಲಂಕಾ ಸ್ಥಿತಿಯ ಬಗ್ಗೆ ದಿನದಿನಕ್ಕೂ ಪರಿಷ್ಕೃತ ಮಾಹಿತಿಗಳನ್ನು ಸ್ವೀಕರಿಸುತ್ತಿದ್ದು, ಶ್ವೇತಭವನವು ಶ್ರೀಲಂಕಾ ಪರಿಸ್ಥಿತಿ ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏತನ್ಮಧ್ಯೆ, ಸೇನಾ ಕಾರ್ಯಾಚರಣೆ ಮತ್ತು ಭಾರೀ ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸಿದ್ದಾಗಿ ಶ್ರೀಲಂಕಾ ಸರ್ಕಾರದ ಹೇಳಿಕೆಯಿಂದ ಉತ್ತೇಜಿತರಾಗಿದ್ದಾಗಿ ವಿದೇಶಾಂಗ ಇಲಾಖೆ ಹೇಳಿದೆ.
|