ಪಾಕಿಸ್ತಾನದ ಮಿಲಿಟರಿಯು ವಾಯವ್ಯ ದಿರ್‌ನಲ್ಲಿ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಹೆಲಿಕಾಪ್ಟರ್ ಬಂದೂಕುಗಳು ಉಗ್ರರ ನೆಲೆಗಳ ಮೇಲೆ ಗುಂಡುಗಳ ಸುರಿಮಳೆ ಸುರಿಸಿದ್ದರಿಂದ ನೂರಾರು ನಿವಾಸಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಕಳೆದ ಭಾನುವಾರದಿಂದ 50 ಉಗ್ರಗಾಮಿಗಳು ಮತ್ತು 13 ಭದ್ರತಾ ಸಿಬ್ಬಂದಿ ಸತ್ತಿದ್ದಾರೆಂದು ದಿರ್ ಅಧಿಕಾರಿಗಳು ಹೇಳಿದ್ದಾರೆ. ದಿರ್‌ನಲ್ಲಿ ಪಾಕ್ ಮಿಲಿಟರಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ತಾಲಿಬಾನ್ ಶಾಂತಿ ಮಾತುಕತೆಯನ್ನು ಸ್ಥಗಿತಗೊಳಿಸಿದೆ.
ತಾಲಿಬಾನ್ ಉಪಟಳ ಕೊನೆಗೊಳಿಸಿದರೆ ಮಲಕಾಂಡ್ ವಿಭಾಗದ 6 ಜಿಲ್ಲೆಗಳಲ್ಲಿ ಷರಿಯತ್ ಕಾನೂನು ಜಾರಿಗೆ ಅನುಮತಿಸುವುದಾಗಿ ವಾಯವ್ಯ ಗಡಿ ಪ್ರಾಂತ್ಯದ ಸರ್ಕಾರ ಒಪ್ಪಿಗೆ ಸೂಚಿಸಿತ್ತು.ಆದಾಗ್ಯೂ, ತಾಲಿಬಾನಿಗಳು ಶಸ್ತ್ರಾಸ್ತ್ರ ತ್ಯಜಿಸದೇ ತಮ್ಮ ಭಯೋತ್ಪಾದನೆ ಚಟುವಟಿಕೆಯನ್ನು ವಿಸ್ತರಿಸಿದ್ದು, ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳಿಗಲ್ಲದೇ ಪಾಕಿಸ್ತಾನ ಕೂಡ ಕಳವಳಪಟ್ಟಿದೆ.
ಭದ್ರತಾಪಡೆಗಳು ಸ್ವಾತ್‌ನಿಂದ ದಿರ್ ಪ್ರದೇಶವನ್ನು ಪ್ರತ್ಯೇಕಿಸುವ ಬೆಟ್ಟಗಳಲ್ಲಿರುವ ಉಗ್ರಗಾಮಿಗಳ ಅಡಗುತಾಣಗಳ ಮೇಲೆ ಗುರಿಯಿರಿಸಿದ್ದು, ತಾಲಿಬಾನಿಗಳು ಇನ್ನಷ್ಟು ಕಡಿದಾದ ದಿರ್‌ನ ಮೇಲಿನ ಪ್ರದೇಶದಲ್ಲಿ ಈಗಾಗಲೇ ಇರುವ ಅಡಗುತಾಣಗಳಿಗೆ ಪಲಾಯನ ಮಾಡಬಹುದೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. |