ಇರಾಕಿನ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬಾಲಕಿಯ ಕುಟುಂಬದ ಹತ್ಯೆ ನಡೆಸಿದ ಸೂತ್ರಧಾರಿಯಾದ ಅಮೆರಿಕದ ಮಾಜಿ ಸೈನಿಕನೊಬ್ಬನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಹತ್ಯೆ ಬೆಳಕಿಗೆ ಬರುವ ಮುಂಚೆ ವ್ಯಕ್ತಿತ್ವದ ದೋಷದಿಂದಾಗಿ ಸ್ಟೀವನ್ ಗ್ರೀನ್‌ನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಕೆಂಟುಕಿಯಲ್ಲಿ ನಡೆದ ವಿಚಾರಣೆಯಲ್ಲಿ ಅವನನ್ನು ಮರಣದಂಡನೆ ಶಿಕ್ಷೆಗೆ ಗುರಿಮಾಡಲಾಯಿತು. ಮಾರ್ಚ್ 2006ರಂದು ನಡೆದ ಈ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸೈನಿಕರಿಗೆ ಕೂಡ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮಹಮುಡಿಯದ ಸಂಚಾರಿ ಚೆಕ್‌ಪೋಸ್ಟ್‌ನಲ್ಲಿ ವಿಸ್ಕಿ ಹೀರುತ್ತಾ, ಕಾರ್ಡ್ಸ್ ಆಡುವಾಗ ಅತ್ಯಾಚಾರದ ಯೋಜನೆಯನ್ನು ದುಷ್ಕರ್ಮಿಗಳು ರೂಪಿಸಿದರು. ದೌರ್ಜನ್ಯ ನಡೆಸುವಾಗ ಕಾವಲು ಕಾಯುತ್ತಿದ್ದ ನಾಲ್ಕನೇ ಸೈನಿಕನಿಗೆ ಕೂಡ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಆರಂಭದಿಂದಲೂ ಸ್ಟೀವನ್ ಗ್ರೀನ್ ತಾನು ಅಬೀರ್ ಮತ್ತು ಅವಳ ಕುಟುಂಬಕ್ಕೆ ಯಾವ ಗತಿ ಕಾಣಿಸಿದೆನೆಂದು ಇತರೆ ಜನರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದನೆಂದು ಪ್ರಾಸಿಕ್ಯೂಟರ್ ಬ್ರಿಯಾನ್ ಸ್ಕಾರೆಟ್ ತಿಳಿಸಿದ್ದಾರೆ. ತನ್ನ ದುಷ್ಕೃತ್ಯದ ಬಗ್ಗೆ ಕೊಚ್ಚಿಕೊಳ್ಳುತ್ತಾ ಎಷ್ಟೊಂದು ರೌದ್ರತೆಯಿಂದ ಕೂಡಿತ್ತೆಂದು ಹೇಳುತ್ತಿದ್ದನೆಂದು ಅವರು ತಿಳಿಸಿದ್ದಾರೆ.
ಉಳಿದ ಸೈನಿಕರು 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರೆ ಗ್ರೀನ್ ಬಾಲಕಿಯ ತಂದೆ, ತಾಯಿ ಮತ್ತು 6 ವರ್ಷ ವಯಸ್ಸಿನ ಸೋದರಿಯನ್ನು ಮಲಗುವ ಕೋಣೆಗೆ ಕರೆದೊಯ್ದು ಗುಂಡುಹಾರಿಸಿ ಕೊಂದನೆಂದು ಸ್ಕಾರೆಟ್ ತೀರ್ಪುಗಾರರಿಗೆ ತಿಳಿಸಿದರು. ಅಲ್ಲಿಂದ ಹೊರಕ್ಕೆ ಬಂದ ಬಳಿಕ ಅವರೆಲ್ಲ ಸತ್ತಿದ್ದಾರೆಂದು ಉದ್ಘರಿಸಿ ಅಳುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗುಂಡಿಕ್ಕಿ ಕೊಂದ ಬಳಿಕ ಸಾಕ್ಷ್ಯಾಧಾರ ಮುಚ್ಚಿಹಾಕಲು ಅವಳ ದೇಹಕ್ಕೆ ಬೆಂಕಿಹಚ್ಚಿ ಕೊಂದುಹಾಕಿದನೆಂದು ಹೇಳಲಾಗಿದೆ. |