ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಧಿಕಾರದ 100 ದಿನಗಳ ಸಾಧನೆ ಮೆಚ್ಚುಗೆಗೆ ಅರ್ಹವಾಗಿದೆಯೇ ಅಥವಾ ಇಲ್ಲವೇ? ಈ ಮೈಲಿಗಲ್ಲು ದಾಟಿದ ಅವರ ಸಾಧನೆಗಳೇನು? 'ಇಂದಿನಿಂದ ನಾವು ಧೂಳನ್ನು ಕೊಡವಿಕೊಂಡು, ಎದ್ದುನಿಂತು ಅಮೆರಿಕದ ಪುನರ್ರಚನೆ ಕೆಲಸವನ್ನು ಪುನಃ ಆರಂಭಿಸಬೇಕು' ಎಂದು 2009ರ ಜನವರಿ 9ರಂದು ನ್ಯಾಷನಲ್ ಮಾಲ್‌ನಲ್ಲಿ ಕಿಕ್ಕಿರಿದ ಭಾರೀ ಜನಸ್ತೋಮಕ್ಕೆ ಒಬಾಮಾ ತಿಳಿಸಿದ್ದರು.
ಒಬಾಮಾ ಈ ಮಾತನ್ನು ಹೇಳಿ ನೂರು ದಿನಗಳಾದ ಬಳಿಕ ಅವರ ಸಾಧನೆಯ ಬಗ್ಗೆ ಕೆಲವರು ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ. ಗೌಂಟನಾಮಾ ಬೇ ಕಾರಾಗೃಹ ಮುಚ್ಚುವಂತೆ ಆದೇಶ, ಭಯೋತ್ಪಾದನೆ ಶಂಕಿತರಿಗೆ ತನಿಖೆ ನೀತಿಗಳಲ್ಲಿ ಪರಾಮರ್ಶೆ, 2010ರೊಳಗೆ ಬಹುತೇಕ ಪಡೆಗಳನ್ನು ಇರಾಕ್‌ನಿಂದ ವಾಪಸಾತಿ ಭರವಸೆ ಮತ್ತು ಹಿಂಜರಿತದ ಆರ್ಥಿಕತೆ ಪುನಶ್ಚೇತನಕ್ಕೆ 887 ಬಿಲಿಯ ಡಾಲರ್ ಆರ್ಥಿಕ ಪ್ಯಾಕೇಜ್ ಮತ್ತು ಬ್ಯಾಂಕಿಂಗ್ ವಲಯ, ವಾಹನೋದ್ಯಮ ಮತ್ತು ಸ್ಥಿರಾಸ್ತಿ ಕ್ಷೇತ್ರಗಳ ರಕ್ಷಣಾ ಯೋಜನೆಗಳು ಪ್ರಶಂಸೆಗೆ ಒಳಗಾಗಿವೆ.
ಆದರೆ ಇನ್ನೂ ಕೆಲವರು ಒಬಾಮಾ ಮಿತಿಮೀರಿ ಹೋಗುತ್ತಿದ್ದಾರೆಂದು ದೂರಿದ್ದಾರೆ. ಆರ್ಥಿಕ ವ್ಯವಹಾರಗಳು, ಆರ್ಥಿಕತೆಯ ಪುನರ್ರಚನೆಗೆ ರೋಮ್ ಸರ್ವಾಧಿಕಾರಿಯ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಕಲ್ಪನೆಯನ್ನು ಒಬಾಮಾ ಪ್ರತಿಪಾದಿಸುವುದನ್ನು ಅಪಾಯಕಾರಿ ಎಂದು ಕ್ಯಾಟೊ ಇನ್‌ಸ್ಟಿಟ್ಯೂಟ್ ಉಪಾಧ್ಯಕ್ಷ ಜೀನ್ ಹೀಲೆ ತಿಳಿಸಿದ್ದಾರೆ.
ಆದರೆ ಹೊಸ ಎಪಿ ಸಮೀಕ್ಷೆ ಪ್ರಕಾರ, 5 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕ ಸರಿಯಾದ ದಾರಿಯಲ್ಲಿ ಸಾಗಿರುವುದಾಗಿ ಅನೇಕ ಮಂದಿ ಹೇಳುತ್ತಾರೆ. ಲಕ್ಷಾಂತರ ಅಮೆರಿಕನ್ನರಿಗೆ ನಿರುದ್ಯೋಗದ ಬಿಸಿ ತಟ್ಟಿದಾಗ, ಆರೋಗ್ಯ ವಿಮೆಯ ಬಗ್ಗೆ ಚಿಂತಿತರಾದಾಗ, ತೆರಿಗೆದಾರರ ಹಣವು ಬೇಲ್‌ಔಟ್‌ಗಳಿಗೆ ವೆಚ್ಚವಾಗುವ ಬಗ್ಗೆ ಆಕ್ರೋಶಿತರಾಗಿರುವ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಒಬಾಮಾ 100 ದಿನಗಳ ಅಧಿಕಾರಾವಧಿಯಲ್ಲಿ ರಾಷ್ಟ್ರವನ್ನು ಪುನಃ ಹಳಿಯ ಮೇಲಿಡಲು ಸೂಕ್ತ ಹೆಜ್ಜೆಗಳನ್ನು ಇಡುತ್ತಿದ್ದಾರೆಂದು ಬಹುತೇಕ ಮಂದಿ ನಂಬಿಕೆ ವ್ಯಕ್ತಪಡಿಸಿದ್ದಾರೆ. |