ಬ್ರಿಟನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಅವರು ಪಾಕಿಸ್ತಾನದ ಪ್ರಕ್ಷುದ್ಧ ಬುಡಕಟ್ಟು ವಲಯವನ್ನು ಭಯೋತ್ಪಾದನೆಯ ಮೂಸೆಯೆಂದು ವರ್ಣಿಸಿದ್ದಾರೆ.
'ಅಲ್ ಖಾಯಿದಾ ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಸುರಕ್ಷಿತ ಸ್ವರ್ಗವನ್ನು ಕಂಡುಕೊಂಡಿದೆ. ನಿಮ್ಮ ರಾಷ್ಟ್ರದ ಮೇಲೆ ಮಾತ್ರವಲ್ಲದೇ ನಮ್ಮ ರಾಷ್ಟ್ರದ ಮೇಲೆ ಕೂಡ ಮಾರಕ ದಾಳಿಗಳನ್ನು ನಡೆಸಲು ಅಲ್ ಖಾಯಿದಾ ಯೋಜಿಸುತ್ತಿದೆ' ಎಂದು ಪಾಕಿಸ್ತಾನದ ಸಹವರ್ತಿ ಯುಸುಫ್ ರಾಜಾ ಗಿಲಾನಿ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬ್ರೌನ್ ತಿಳಿಸಿದರು.
ಬ್ರಿಟನ್ ಭಯೋತ್ಪಾದಕ ಸಂಚಿನಲ್ಲಿ 11 ಮಂದಿ ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ಬಂಧಿಸಿದ್ದರಿಂದ ಇಸ್ಲಾಮಾಬಾದ್‌ನಲ್ಲಿ ಆಕ್ರೋಶ ಭುಗಿಲೆದ್ದಿರುವ ನಡುವೆ ರಾಜತಾಂತ್ರಿಕ ವಿವಾದವನ್ನು ಶಮನಗೊಳಿಸಲು ಉಭಯ ರಾಷ್ಟ್ರಗಳು ಮುಂದಾಗಿವೆ.
ಏತನ್ಮಧ್ಯೆ ಬ್ರೌನ್ ಇಸ್ಲಾಮಿಕ್ ರಾಷ್ಟ್ರಗಳ ಭಯೋತ್ಪಾದನೆ ವಿರೋಧಿ ಸಾಮರ್ಥ್ಯದ ಉತ್ತೇಜನಕ್ಕೆ 10 ಮಿಲಿಯ ಪೌಂಡ್ ಪ್ಯಾಕೇಜ್ ಪ್ರಕಟಿಸಿದ್ದಾರೆ. ಪಾಕಿಸ್ತಾನ ಭದ್ರತಾ ಪಡೆಗಳ ಭಯೋತ್ಪಾದನೆ ನಿಗ್ರಹ ಸಾಮರ್ಥ್ಯ ಬಲಪಡಿಸಲು 10 ಮಿಲಿಯ ಪೌಂಡ್ ಬ್ರಿಟನ್ ಒದಗಿಸುತ್ತದೆಂದು ಬ್ರೌನ್ ಹೇಳಿದರು. |