ಎಲ್‌ಟಿಟಿಇ ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದೆಯೆಂದು ಅನೇಕ ಮಂದಿ ವ್ಯಕ್ತಪಡಿಸಿದ ಶಂಕೆ ಎಲ್‌ಟಿಟಿಇಯ ಇಬ್ಬರು ಉನ್ನತ ನಾಯಕರ ತಪ್ಪೊಪ್ಪಿಗೆ ಹೇಳಿಕೆಗಳಿಂದ ದೃಢಪಟ್ಟಿದೆ.
ಮಾಜಿ ಮಾಧ್ಯಮ ಸಮನ್ವಯಾಧಿಕಾರಿ ದಯಾ ಮಾಸ್ಟರ್ ಮತ್ತು ಎಲ್‌ಟಿಟಿಇ ನಾಯಕರೊಬ್ಬರಿಗೆ ದುಬಾಷಿಯಾಗಿದ್ದ ಜಾರ್ಜ್ ಮಾಸ್ಟರ್ ಅವರ ತಪ್ಪೊಪ್ಪಿಗೆ ಹೇಳಿಕೆಗಳನ್ನು ಶ್ರೀಲಂಕಾದ ಟೆಲಿವಿಷನ್ ಜಾಲದಲ್ಲಿ ಪ್ರಥಮ ಬಾರಿಗೆ ಪ್ರಸಾರ ಮಾಡಲಾಯಿತು. ಶ್ರೀಲಂಕಾ ಸೇನೆಗೆ ಶರಣಾಗತಿಯಾಗಿರುವ ಇಬ್ಬರು ಮಾಜಿ ಎಲ್‌ಟಿಟಿಇ ನಾಯಕರುಗಳು, ನಾಗರಿಕನ್ನು ತಮಿಳು ಬಂಡುಕೋರರು ಒತ್ತೆಯಾಳಾಗಿ ಸಹ ಇರಿಸಿಕೊಂಡಿದ್ದಾರೆಂದು ಕೂಡ ಖಚಿತಪಡಿಸಿದ್ದಾರೆ.
'ಎಲ್‌ಟಿಟಿಇ ಜನರು ತಪ್ಪಿಸಿಕೊಳ್ಳದಂತೆ ತಡೆಯುತ್ತಿದೆ. ಆದರೆ ಬಲಶಾಲಿಗಳಾದವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಅನೇಕ ಮಂದಿಯನ್ನು ಎಲ್‌ಟಿಟಿಇ ಹತ್ಯೆ ಮಾಡಿದೆ' ಎಂದು ಜಾರ್ಜ್ ಮಾಸ್ಟರ್ ಹೇಳಿದ್ದಾನೆ.ಆದರೆ ಪ್ರಭಾಕರನ್‌ನ ಇಬ್ಬರು ಸಂಗಡಿಗರಿಂದಲೇ ಅವನ ಯುದ್ಧಾಪರಾಧಗಳು ಜಗತ್ತಿಗೆ ಬಹಿರಂಗವಾದರೂ, ಪ್ರಭಾಕರನ್ ಕಾಯಿಲೆ ಬೀಳುವುದು ಭಾರತಕ್ಕೆ ಇಷ್ಟವಿಲ್ಲವೆಂದು ಕೇಂದ್ರ ಗೃಹಸಚಿವ ಚಿದಂಬರಂ ಹೇಳಿರುವುದು ಕಾಕತಾಳೀಯವಾಗಿದೆ.
ಪ್ರಭಾಕರನ್ ಶಸ್ತ್ರಾಸ್ತ್ರ ಒಪ್ಪಿಸಿ ಮಾತುಕತೆಗೆ ಇಳಿಯಬೇಕೆಂದೂ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಆದರೆ ಪ್ರಭಾಕರನ್ ಎಲ್ಲಿದ್ದಾನೆ ಮತ್ತು ಅವನನ್ನು ಜೀವಂತ ಸೆರೆಹಿಡಿಯಲು ಸಾಧ್ಯವೇ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಆದರೆ ಅವನನ್ನು ತೀರಾ ಹತ್ತಿರದಿಂದ ಬಲ್ಲವರು, ಪ್ರಭಾಕರನ್ ಸಿಗುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.
ಪ್ರಭಾಕರನ್ ಅಂಗರಕ್ಷಕರಾಗಿದ್ದ ಕರುಣಾ, 2003ರಲ್ಲಿ ಶಾಂತಿ ಒಪ್ಪಂದಕ್ಕೆ ಸಮ್ಮತಿಸಲು ಪ್ರಭಾಕರನ್ ನಿರಾಕರಿಸಿದ್ದರಿಂದ ಎಲ್‌ಟಿಟಿಯನ್ನು ತ್ಯಜಿಸಿದ್ದರು. ಎಲ್‌ಟಿಟಿಇಯಲ್ಲಿ ಒಡಕು ಉಂಟಾಗಿದ್ದರಿಂದ ಮೂರನೇ ಒಂದು ಭಾಗದ ಪ್ರದೇಶವನ್ನು ಎಲ್‌ಟಿಟಿಇ ಕಳೆದುಕೊಂಡಿತ್ತು. ಈಗ ರಾಷ್ಟ್ರೀಯ ಏಕತೆ ಉಸ್ತುವಾರಿ ಸಚಿವರಾಗಿ ಕರುಣಾ ಕಾರ್ಯನಿರ್ವಹಿಸುತ್ತಿದ್ದಾರೆ. |