ಉಗ್ರಗಾಮಿ ಸಂಘಟನೆ ತಾಲಿಬಾನ್ ಕೆಂಗಣ್ಣು ಮಾಧ್ಯಮದ ಮೇಲೆ ಹರಿದಿದ್ದು, ತಮ್ಮ ವಿರುದ್ಧ ಯಾವುದೇ ಹೇಳಿಕೆ ಅಥವಾ ವರದಿ ಪ್ರಕಟಿಸಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಮಾಧ್ಯಮಕ್ಕೆ ಬೆದರಿಕೆ ಹಾಕಿದೆ.
ಸುದ್ದಿ ಚಾನೆಲ್‌ಗಳು ಮತ್ತು ಸುದ್ದಿಪತ್ರಿಕೆಗಳ ಕಚೇರಿಗಳ ಮುಂದೆ ತಾಲಿಬಾನ್ ಕಮಾಂಡರ್ ಪರವಾಗಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಮಾಧ್ಯಮವು ತಾಲಿಬಾನ್ ವಿರುದ್ಧ ನಕಾರಾತ್ಮಕ ವರದಿಗಳನ್ನು ಪ್ರಕಟಿಸುತ್ತಿರುವುದಾಗಿ ದೂರಿದೆ. 'ತಾಲಿಬಾನ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಮಾಧ್ಯಮದ ವ್ಯಕ್ತಿಗಳು ಸಂಯಮದಿಂದ ವರ್ತಿಸಬೇಕು. ಇಲ್ಲದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದೀತು.
ಮಾಧ್ಯಮವು ತಾಲಿಬಾನ್ ವಿರುದ್ಧ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ ಷರಿಯತ್ ಕೋರ್ಟ್‌ಗಳನ್ನು ಮಾಧ್ಯಮದ ವಿರುದ್ಧ ತಿರುಗಿಸುವುದಾಗಿ' ಭಿತ್ತಿಪತ್ರದಲ್ಲಿ ಹೇಳಲಾಗಿದೆ. ತಾಲಿಬಾನ್ ಬೆದರಿಕೆಯನ್ನು ವಿಷಾದನೀಯ ಎಂದು ಇಸ್ಲಾಮಾಬಾದ್ ಪ್ರೆಸ್ ಕ್ಲಬ್‌ನ ತಾರಿಖ್ ಚೌಧರಿ ಹೇಳಿದ್ದಾರೆ.
'ಈ ಬೆದರಿಕೆ ವಿರುದ್ಧ ಪತ್ರಕರ್ತರ ಸಮುದಾಯ ಕಾರ್ಯತಂತ್ರವನ್ನು ರೂಪಿಸಲಿದೆ. ಮಾಧ್ಯಮವು ಶಾಂತಿ ಒಪ್ಪಂದವನ್ನು ಬೆಂಬಲಿಸಿದ್ದು, ಬೆದರಿಕೆಯು ತಮ್ಮ ಕಡೆಯಿಂದ ಬಂದಿದೆಯೇ ಅಥವಾ ಬೇರೆಯವರ ಬೆದರಿಕೆ ಬಗ್ಗೆ ತಾಲಿಬಾನ್ ತನಿಖೆ ನಡೆಸಬೇಕು' ಎಂದು ಅವರು ಹೇಳಿದ್ದಾರೆ.
ಮಾಧ್ಯಮವು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು, ಅದರ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ತಾಲಿಬಾನ್ ಅವರ ಕೆಲಸವನ್ನು ಮಾಡಲಿ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. |