ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯ ಸುರಕ್ಷಿತ ತಾಣಗಳಿಂದ ಭಯೋತ್ಪಾದಕರು ಪೂರ್ವ ಆಫ್ರಿಕಾಗೆ ನುಸುಳಿ ಆತ್ಮಾಹುತಿ ದಾಳಿಗಳು ಸೇರಿದಂತೆ ಅತ್ಯಾಧುನಿಕ ಭಯೋತ್ಪಾದಕ ತಂತ್ರಗಳನ್ನು ಒಯ್ದಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ. ತೀವ್ರ ಬರದ ಬೇಗೆಯಿಂದ ಬೆಂದಿರುವ ಸೋಮಾಲಿಯ ಮುಂದಿನ ಆಫ್ಘಾನಿಸ್ತಾನದ ಹಾದಿ ಹಿಡಿಯುವ ಲಕ್ಷಣಗಳು ಕಾಣಿಸಿವೆಯೆಂದು ಅಮೆರಿಕ ಮಿಲಿಟರಿ ಮತ್ತು ಭಯೋತ್ಪಾದಕ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ ಖಾಯಿದಾ ಸಖ್ಯದ ಸಂಘಟನೆಗಳು ತರಬೇತಿ ಹೊಂದಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿಗಳನ್ನು ಯೋಜಿಸಲು ಸೋಮಾಲಿಯ ಸುರಕ್ಷಿತ ತಾಣವೆಂದು ಅವರು ಹೇಳಿದ್ದಾರೆ. ನೈರುತ್ಯ ಏಷ್ಯಾದಿಂದ ಮತ್ತು ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಿಂದ ಆಫ್ರಿಕಾ ನೆಲಕ್ಕೆ ವಲಸೆ ಹೋಗಿರುವ ಉಗ್ರರ ಸಂಖ್ಯೆ ಸದ್ಯಕ್ಕೆ ಚಿಕ್ಕಪ್ರಮಾಣದಲ್ಲಿದ್ದು, ಎರಡು ಅಥವಾ ಮೂರು ಡಜನ್ ಇರಬಹುದೆಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ ಕೀನ್ಯಾ ಮತ್ತು ತಾಂಜಾನಿಯದಲ್ಲಿ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿಯಲ್ಲಿ ಷಡ್ಯಂತ್ರ ಹೂಡಿದ ಸಂಚುಗಾರರು ಉಗ್ರಗಾಮಿಗಳ ಸಣ್ಣ ತಂಡವಾಗಿತ್ತೆಂದು ಅವರು ಹೇಳಿದ್ದಾರೆ. ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ 7 ವರ್ಷಗಳ ಸಮರದ ಅನುಭವದಿಂದ ಉಗ್ರರ ಗುಂಪು ಅತ್ಯಾಧುನಿಕ ದಾಳಿ ತಂತ್ರಗಳನ್ನು ಹೆಣೆಯುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ ಖಾಯಿದಾ ಉಗ್ರರ ಚಲನವಲನವು ಆಡಳಿತರಹಿತ ಪಾಕಿಸ್ತಾನದ ಗಡಿಯನ್ನು ಸುರಕ್ಷಿತ ತಾಣವಾಗಿ ತ್ಯಜಿಸುತ್ತಾರೆಂದು ತಿಳಿಯಬಾರದೆಂದು ಮಿಲಿಟರಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಬದಲಿಗೆ ಅಲ್ ಖಾಯಿದಾ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು, ಈಗಾಗಲೇ ಉಗ್ರಗಾಮಿಗಳ ಉಪಟಳಕ್ಕೆ ಗುರಿಯಾಗಿರುವ ಪ್ರದೇಶದಲ್ಲಿ ಇನ್ನಷ್ಟು ತರಬೇತಿ ನೀಡುವ ಅಭಿಯಾನವೆಂದು ತಿಳಿದಿದ್ದಾರೆ.
ಅಲ್ ಖಾಯಿದಾ ಸೊಮಾಲಿಯ ಮೇಲೆ ಕಣ್ಣಿರಿಸಿದೆಯೆಂದು ಕಳೆದ ತಿಂಗಳು ಧ್ವನಿಮುದ್ರಿತ ಸಂದೇಶದಲ್ಲಿ ಲಾಡೆನ್ ಸ್ಪಷ್ಟವಾಗಿ ಹೇಳಿದ್ದನು. ನೂತನ ಸೌಮ್ಯವಾದಿ ಇಸ್ಲಾಮಿಕ್ ಅಧ್ಯಕ್ಷರನ್ನು ಕೆಳಕ್ಕಿಳಿಸಿ, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾಕ್‌ನಲ್ಲಿರುವ ಜಿಹಾದಿ ಸೋದರರಿಗೆ ಬೆಂಬಲಿಸುವಂತೆ ಅವನು ಸೊಮಾಲಿಗಳಿಗೆ ಆಗ್ರಹಿಸಿದ್ದನು. |