ತಮಿಳು ವ್ಯಾಘ್ರ ಬಂಡುಕೋರರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಬ್ರಿಟನ್ ಮತ್ತು ಫ್ರೆಂಚ್ ವಿದೇಶಾಂಗ ಸಚಿವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
'ತಮಿಳು ವ್ಯಾಘ್ರ ಬಂಡುಕೋರ ನಾಯಕನ ಜೀವವುಳಿಸುವುದು ನಮ್ಮ ಗುರಿಯಲ್ಲ. ಬದಲಿಗೆ ಯುದ್ಧವಲಯದಲ್ಲಿ ಸಿಕ್ಕಿಬಿದ್ದ ಸಾವಿರಾರು ನಾಗರಿಕರ ಜೀವವುಳಿಸುವುದು ನಮ್ಮ ಉದ್ದೇಶವೆಂದು' ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬ್ಯಾಂಡ್ ತಿಳಿಸಿದರು. ಆದರೆ ಕದನವಿರಾಮಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುವುದು ಅಸಂಭವ ಎಂದು ವರದಿಗಾರರು ತಿಳಿಸಿದ್ದಾರೆ.
ಪ್ರಭಾಕರನ್ ಜೀವವುಳಿಸಲು ಕದನವಿರಾಮ ಘೋಷಿಸುವಂತೆ ಅಥವಾ ಗುಂಡು ಹಾರಾಟ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಒತ್ತಾಯಿಸುತ್ತಿಲ್ಲ. ಕದನವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರ ಹಿತರಕ್ಷಣೆ ದೃಷ್ಟಿಯಿಂದ ಈ ಕರೆ ನೀಡಲಾಗಿದೆ ಎಂದು ಮಿಲಿಬ್ಯಾಂಡ್ ಹೇಳಿದರು.ಇದಕ್ಕೆ ಮುಂಚೆ ಇದೇ ರೀತಿಯ ಕರೆಗಳನ್ನು ಸರ್ಕಾರ ತಿರಸ್ಕರಿಸಿದ್ದು, ಐರೋಪ್ಯ ರಾಷ್ಟ್ರಗಳ ಜತೆ ಅದರ ಬಾಂಧವ್ಯ ಉದ್ವಿಗ್ನಕಾರಿಯಾಗಿ ಪರಿಣಮಿಸಿದೆ.
ಸ್ವೀಡನ್ ವಿದೇಶಾಂಗ ಸಚಿವ ಕಾರ್ಲ್ ಬಿಲ್ಟ್ ಅವರು ಐರೋಪ್ಯ ಸಹವರ್ತಿಗಳ ಜತೆ ಭೇಟಿ ನೀಡಬೇಕಿತ್ತು. ಆದರೆ ಶ್ರೀಲಂಕಾ ಸರ್ಕಾರ ಅವರಿಗೆ ಪ್ರವೇಶ ನಿರಾಕರಿಸಿದೆ. ಈ ನಿರಾಕರಣೆಯನ್ನು ಐರೋಪ್ಯ ಒಕ್ಕೂಟ ಗಂಭೀರವಾಗಿ ಟೀಕಿಸಿದೆ.ಹೋರಾಟಕ್ಕೆ ತೆರೆಎಳೆಯಲು ಈಗ ಕಾಲ ಕೂಡಿಬಂದಿದೆ. ಶ್ರೀಲಂಕಾದ ಮಿಲಿಟರಿ ಮುನ್ನಡೆ ಚಮತ್ಕಾರಿಕವಾಗಿದೆ. ಆದರೆ ಯುದ್ಧ ಗೆಲ್ಲುವಂತೆ ಶಾಂತಿ ಮೂಡಿಸುವುದು ಕೂಡ ಅಷ್ಟೇ ಮುಖ್ಯ ಎಂದು ಮಿಲಿಬ್ಯಾಂಡ್ ಹೇಳಿದರು. |