ಇತ್ತೀಚಿಗೆ ತಮ್ಮ ರಾಷ್ಟ್ರವು ಹಮ್ಮಿಕೊಂಡ ರಾಕೆಟ್ ಉಡಾವಣೆಯನ್ನು ವಿಶ್ವಸಂಸ್ಥೆ ಖಂಡಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾಮಂಡಳಿ ಕ್ಷಮಾಪಣೆ ಕೋರಬೇಕೆಂದು ಉತ್ತರ ಕೊರಿಯ ಆಗ್ರಹಿಸಿದ್ದು, ಕ್ಷಮಾಪಣೆ ಕೋರದಿದ್ದರೆ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವುದಾಗಿ ಅದು ಬೆದರಿಕೆ ಹಾಕಿದೆ.
ಕ್ಷಮಾಪಣೆ ಕೇಳದಿದ್ದರೆ ಪರಮಾಣು ಮತ್ತು ಖಂಡಾಂತರ ಕ್ಷಿಪಣಿ ಪರೀಕ್ಷೆಗಳು ಸೇರಿದಂತೆ ಸ್ವಯಂರಕ್ಷಣೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಉತ್ತರ ಕೊರಿಯ ಎಚ್ಚರಿಸಿದೆ. ಉತ್ತರ ಕೊರಿಯ ಏಪ್ರಿಲ್ 5ರಂದು ರಾಕೆಟ್ ಉಡಾವಣೆ ಮಾಡಿದಾಗ, ಈ ಉಡಾವಣೆಯನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ಕ್ಷಿಪಣಿ ಪರೀಕ್ಷೆಯ ಸೋಗು ಎಂದು ಬಣ್ಣನೆ ಮಾಡಿತ್ತು.
ಉತ್ತರ ಕೊರಿಯದ ಉಡಾವಣೆಯನ್ನು ವಿಶ್ವಸಂಸ್ಥೆ ಕೂಡ ಖಂಡಿಸಿ, ಕಠಿಣ ದಿಗ್ಬಂಧನ ವಿಧಿಸಬೇಕೆಂದು ಕರೆ ನೀಡಿತ್ತು. ತಾನು ಸಂಪರ್ಕ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸಿದ್ದಾಗಿ ಉತ್ತರಕೊರಿಯ ಸಮಜಾಯಿಷಿ ನೀಡಿ, ದಿಗ್ಬಂಧನಗಳನ್ನು ಉಪೇಕ್ಷಿಸುವುದಾಗಿ ಹೇಳಿದ್ದಲ್ಲದೇ ವಿಶ್ವಸಂಸ್ಥೆ ನಿಯಮಗಳ ಉಲ್ಲಂಘನೆಯೆಂದು ಹೇಳಿದೆ.
ಹಗುರ ಜಲ ಪರಮಾಣು ಸ್ಥಾವರ ನಿರ್ಮಾಣದ ಯೋಜನೆಯನ್ನು ಕೂಡ ಉ.ಕೊರಿಯ ಪ್ರಕಟಿಸಿತ್ತು. ವಿಶ್ವಸಂಸ್ಥೆ ರಾಕೆಟ್ ಉಡಾವಣೆ ಖಂಡಿಸಿದ ಹಿನ್ನೆಲೆಯಲ್ಲಿ ಉ.ಕೊರಿಯ ತನ್ನ ಪರಮಾಣು ಸ್ಥಗಿತ ಮಾತುಕತೆಯಿಂದ ಹಿಂದೆ ಸರಿದು ರಾಷ್ಟ್ರದಿಂದ ಎಲ್ಲ ತಪಾಸಕರನ್ನು ಹೊರಗಟ್ಟಿದೆ. |