ಬುನೇರ್ ಜಿಲ್ಲೆಯ ವಾಯವ್ಯ ಭಾಗದ ಮುಖ್ಯಪಟ್ಟಣವನ್ನು ಪಾಕಿಸ್ತಾನ ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಸೇನೆ ತಿಳಿಸಿದೆ. ಸೈನಿಕರು ಹೆಲಿಕಾಪ್ಟರ್‌ನಿಂದ ಡಾಗರ್ ಪಟ್ಟಣಕ್ಕೆ ಇಳಿದು ಭೂಸೇನೆಯ ಜತೆ ಸಂಪರ್ಕ ಹೊಂದಿದ್ದಾರೆ.
ಬುನೇರ್ ಕಣಿವೆಯ ಡಾಗರ್ ಪಟ್ಟಣವನ್ನು ಕೈವಶ ಮಾಡಿಕೊಂಡ ವಾಯುಪಡೆ ಪೊಲೀಸ್ ಮತ್ತು ಗಡಿ ತುಕಡಿಯ ಜತೆ ಸಂಪರ್ಕ ಹೊಂದಿದ್ದಾರೆ. ಇಸ್ಲಾಮಾಬಾದ್‌ಗೆ ವಾಯವ್ಯದಲ್ಲಿ ಕೇವಲ 100 ಕಿಮೀ ದೂರದಲ್ಲಿ ತಾಲಿಬಾನ್ ಪ್ರವೇಶವು ಪಾಕಿಸ್ತಾನದಾದ್ಯಂತ ನಡುಕ ಹುಟ್ಟಿಸಿದ್ದು, ಅಮೆರಿಕ ಕೂಡ ಆತಂಕಿತವಾಗಿದೆ.
ಒಸಾಮಾ ಬಿನ್ ಲಾಡೆನ್ ಸೇರಿದಂತೆ ಅಲ್ ಖಾಯಿದಾ ನಾಯಕರು ಅಡಗಿರುವರೆಂದು ಶಂಕಿಸಲಾದ ಆಫ್ಘನ್ ಗಡಿಯ ಭದ್ರಕೋಟೆಯಿಂದ ಇತರೆ ಪ್ರದೇಶಗಳಿಗೆ ತನ್ನ ಕರಿನೆರಳನ್ನು ಚಾಚುತ್ತಿರುವ ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಮೆರಿಕ ತೀವ್ರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕಾರ್ಯೋನ್ಮುಖವಾಗಿದೆ.
ಡಾಗಾರ್ ಬಳಿ ಮತ್ತು ನೆರೆಯ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳು ಪಡೆಗಳನ್ನು ಬುಧವಾರ ಬೆಳಿಗ್ಗೆ ಇಳಿಸಿತೆಂದು ಸೇನೆಯ ಹೇಳಿಕೆ ತಿಳಿಸಿದೆ.ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಡೆಗಳ ಪ್ರಮಾಣವೆಷ್ಟು ಮತ್ತು ಉಗ್ರಗಾಮಿಗಳ ಜತೆ ಅವರು ಘರ್ಷಣೆಗಿಳಿದರೇ ಎನ್ನುವುದನ್ನು ತಿಳಿದುಬಂದಿಲ್ಲ. |