ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಹಂದಿ ಜ್ವರ ಇದೀಗ ಅಮೆರಿಕಕ್ಕೂ ವ್ಯಾಪಿಸಿರುವುದು ದೃಢಪಟ್ಟಿದೆ. 23 ತಿಂಗಳ ಮಗುವೊಂದು ಹಂದಿಜ್ವರಕ್ಕೆ ಬಲಿಯಾಗುವ ಮೂಲಕ ಹಂದಿಜ್ವರದ ವೈರಸ್ ಅಮೆರಿಕಕ್ಕೆ ಕಾಲಿಟ್ಟಿರುವುದಕ್ಕೆ ಸಾಕ್ಷಿಯಾಗಿದೆ.
ಮಗು ಬಲಿಯಾಗಿರುವುದು ಹಂದಿಜ್ವರದಿಂದಲೇ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ದೃಢಪಡಿಸಿದ್ದು, ವಿದೇಶಗಳಿಂದ ಬರುವ ಪ್ರವಾಸಿಗರ ಪರೀಕ್ಷೆಯನ್ನು ತೀವ್ರಗೊಳಿಸಿರುವ ಜತೆಗೆ ರೋಗ ನಿಯಂತ್ರಣಕ್ಕೆ ಪೂರಕ ತಯಾರಿ ಕೈಗೊಂಡಿದೆ.
ಆದರೆ, ಮಾರಣಾಂತಿಕ ಹಂದಿಜ್ವರದ ವೈರಸ್ ಈಗಾಗಲೇ ಮೆಕ್ಸಿಕೋದ ಮಂದಿಯನ್ನು ತಲ್ಲಣಗೊಳಿಸಿರುವ ಜತೆಗ ಅಮೆರಿಕ ಹಾಗೂ ಸುತ್ತಲ ದೇಶಗಳಲ್ಲೂ ಭೀತಿಯನ್ನು ಹುಟ್ಟಿಸಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನೊಂದು ಸಾವಿನ ಪ್ರಕರಣ ಪತ್ತೆಯಾಗಿದ್ದು, ಅದು ಹಂದಿಜ್ವರದಿಂದಲೋ ಅಥವಾ ಬೇರೆ ಕಾರಣಗಳಿಂದಲೋ ಎಂದು ವೈದ್ಯರು ಪರೀಕ್ಷೆ ಮುಂದುವರಿಸಿದ್ದಾರೆ.
ಅಮೆರಿಕದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ರಿಚರ್ಡ್ ಬೆಸ್ಸರ್, ಮಗು ಹಂದಿಜ್ವರದಿಂದಲೇ ಸತ್ತಿದೆ ಎಂಬುದು ದೃಢವಾಗಿದೆ. ಕಳೆದ ಕೆಲವು ದಿನಗಳಿಂದಲೇ ನಾವು ಹಂದಿಜ್ವರದ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೆವು. ಈ ವೈರಸ್ ಯಾರಿಗೆ ದಾಳಿಯಿಡುತ್ತದೆ ಎಂಬುದೇ ಗೊತ್ತಾಗುವುದು ಕಷ್ಟ ಎಂದರು.
ಮೆಕ್ಸಿಕೋದಲ್ಲಿ ಈಗಾಗಲೇ ಹಂದಿ ಜ್ವರ ವ್ಯಾಪಕವಾಗಿ ಹರಡಿದ್ದು ಬಾರ್‌ಗಳು, ಕೆಫೆಗಳು, ಜಿಮ್, ಸಿನಿಮಾ ಮಂದಿರ, ಪ್ರವಾಸಿತಾಣಗಳು, ವಿಶ್ವವಿಖ್ಯಾತ ಅಝ್ಟೆಕ್ ಹಾಗೂ ಮಯನ್ ಪಿರಮಿಡ್‌ಗಳಿಗೆ ಸದ್ಯ್ಕಕೆ ಬೀಗಮುದ್ರೆ ಹಾಕಲಾಗಿದೆ. 159ಕ್ಕೂ ಹೆಚ್ಚು ಮಂದಿ ಸಾವಿಗೀಡಾದ ಬಗ್ಗೆ ವರದಿಯಿದ್ದು, 1,600ಕ್ಕೂ ಹೆಚ್ಚು ಮಂದಿ ಹಂದಿಜ್ವರದಿಂದ ಬಳಲುತ್ತಿದ್ದಾರೆ.
ಜರ್ಮನಿಯಲ್ಲಿ ಮೂರು ಹಂದಿಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಕಾಸ್ಟಾರಿಕಾದಲ್ಲಿ ಎರಡು, ಆಸ್ಟ್ರಿಯಾದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ. ಇಸ್ರೇಲ್, ನ್ಯೂಜಿಲ್ಯಾಂಡ್, ಸ್ಪೈನ್, ಬ್ರಿಟನ್‌ಗಳೂ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ವಿಮಾನ ಪ್ರಯಾಣವನ್ನು ನಿಲ್ಲಿಸಿದರೆ ಪ್ರವಾಸಿಗರು ಮತ್ತೊಂದು ಮಾರ್ಗವನ್ನು ಅನುಸರಿಸುತ್ತಾರೆ. ಹಾಗಾಗಿ ವಿಮಾನಯಾನಕ್ಕೆ ಸದ್ಯ ತಡೆನೀಡಲಾಗುವುದಿಲ್ಲ ಎಂದೂ ಮೆಕ್ಸಿಕೋ ಸರ್ಕಾರ ಹೇಳಿದೆ. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರವಾಸಿಗನನ್ನೂ ರೋಗತಪಾಸಣೆಗೊಳಪಡಿಸಲಾಗುತ್ತಿದೆ. |