ತಾಲಿಬಾನ್ ವಿರುದ್ಧ ಸಮರ ಸಾರಿರುವ ಪಾಕ್ ಸೇನಾಪಡೆಗೆ ಅಮೆರಿಕ ಮುಂದಿನ ಎರಡು ವಾರಗಳ ಕಾಲ ಅವಕಾಶ ನೀಡಿದ್ದು, ತಾಲಿಬಾನ್ ಅನ್ನು ಬೇರುಸಹಿತ ಕಿತ್ತುಹಾಕುವಂತೆ ತಾಕೀತು ಮಾಡಿದೆ.
ಉಗ್ರ ಸಂಘಟನೆಯಾದ ತಾಲಿಬಾನ್ ಅಟ್ಟಹಾಸ ಹೆಚ್ಚುತ್ತಿರುವಂತೆಯೇ, ಅಮೆರಿಕದ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಕೊನೆಗೂ ಪಾಕ್ ಸರ್ಕಾರ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿತ್ತು. ಆ ನಿಟ್ಟಿನಲ್ಲಿ ತಾಲಿಬಾನ್ ಪ್ರಾಬಲ್ಯ ಹೊಂದಿರುವ ಉತ್ತರ ಕಣಿವೆ ಭಾಗದಲ್ಲಿ ಸಮರ ಸಾರಿರುವ ಪಾಕ್ ಸೇನಾ ಕಾರ್ಯಾಚರಣೆಯಲ್ಲಿ ಸುಮಾರು 60 ಮಂದಿ ಉಗ್ರರು ಹತರಾಗಿದ್ದರು.
ಇದೀಗ ಅಮೆರಿಕ ಅಧ್ಯಕ್ಷ ಬರಾಕ್ ಒಮಾಬಾ ಸೋಮವಾರ, ಪಾಕ್ ಮೇಲೆ ತೀವ್ರ ಒತ್ತಡ ಹೇರಿದ್ದು, ತಾಲಿಬಾನ್ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅವರನ್ನು ಬುಡಸಹಿತ ಕಿತ್ತುಹಾಕುವಂತೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನ್ ಉಗ್ರರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವ ಸಮಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಾಗಿ ಅಮೆರಿಕ ದೂರಿದ್ದು, ಗಡಿಭಾಗದಲ್ಲಿನ ತಾಲಿಬಾನ್ ಹಾಗೂ ಅಲ್ ಖಾಯಿದಾ ಉಗ್ರರನ್ನು ಪಾಕ್ ನಿರ್ದಾಕ್ಷಿಣ್ಯವಾಗಿ ಸದೆ ಬಡಿಯಲು ಮುಂದಾಗಬೇಕು ಎಂದು ಅಮೆರಿಕ ಅಂತಿಮ ಎಚ್ಚರಿಕೆ ನೀಡಿದೆ. |