ಜಾಗತಿಕವಾಗಿ ಭೀತಿ ಮೂಡಿಸಿರುವ ಹಂದಿ ಜ್ವರದ ಏಷ್ಯಾದ ಪ್ರಥಮ ರೋಗಿ ಹಾಂಗ್‌ಕಾಂಗ್‌ನಲ್ಲಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
ಸ್ವೈನ್ ಫ್ಲೂ ಸೋಂಕಿನಿಂದ ಬಳಲುತ್ತಿರುವ ರೋಗಿ ಮೆಕ್ಸಿಕೊದಿಂದ ಆಗಮಿಸಿದ ವ್ಯಕ್ತಿಯಾಗಿದ್ದಾರೆ. ಆತ ಗುರುವಾರ ಶಾಂಘೈನಿಂದ ಹಾಂಗ್‌ಕಾಂಗ್‌ಗೆ ಭೇಟಿ ನೀಡಿದ ಪ್ರವಾಸಿಯಾಗಿದ್ದಾರೆ. ಅವರು ವಾನ್ ಚಾಯ್ ಜಿಲ್ಲೆಯ ಖಾಸಗಿ ಹೊಟೇಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಹಾಂಗ್ ಕಾಂಗ್‌ನ ಡೋನಾಲ್ಡ್ ಸಾಂಗ್ ತಿಳಿಸಿದ್ದಾರೆ.
ಇದೀಗ ರೋಗಿಯನ್ನು ನಗರದ ರುಟ್ಟೋಂಜೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಣೆಯಲ್ಲಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಮೆಕ್ಸಿಕೊ ಮತ್ತು ಅಮೆರಿಕದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಸ್ವೈನ್ ಫ್ಲೂ ಸೋಂಕು ಇತರೆ ರಾಷ್ಟ್ರಗಳಿಗೂ ನಿಧಾನವಾಗಿ ಹಬ್ಬುತ್ತಿದ್ದು, ಉತ್ತರ ಅಮೆರಿಕದ ಹೊರಗೆ ಸ್ವೈನ್ ಫ್ಲೂ ಪ್ರಕರಣವು ಸ್ಪೇನ್ ರಾಷ್ಟ್ರದಲ್ಲಿ ಮೊದಲಿಗೆ ದೃಢಪಟ್ಟಿತ್ತು. ಅಮೆರಿಕ ಮತ್ತು ಮೆಕ್ಸಿಕೊಗೆ ಪ್ರಯಾಣಿಸದಂತೆ ಐರೋಪ್ಯನ್ನರಿಗೆ ಯುರೋಪ್ ಒಕ್ಕೂಟದ ಆರೋಗ್ಯ ಆಯುಕ್ತರು ಒತ್ತಾಯಿಸಿದ್ದರು. ಮೆಕ್ಸಿಕೊದಲ್ಲಿ ಸ್ವೈ
ನ್ ಫ್ಲೂ ಶಂಕಿತ ಪ್ರಕರಣಗಳು 1614ಕ್ಕೆ ಏರಿಕೆಯಾಗಿದ್ದು, ಸತ್ತವರ ಸಂಖ್ಯೆ 103ಕ್ಕೆ ಮುಟ್ಟಿತ್ತು. ಅಮೆರಿಕದಲ್ಲಿ ಕನಿಷ್ಠ 20 ಪ್ರಕರಣಗಳು ಪತ್ತೆಯಾಗಿದ್ದು, ಕೆನಡಾದಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ. ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕದಲ್ಲಿ ಹೊಸ ವೈರಸ್ ಸೋಂಕು ಶೀಘ್ರದಲ್ಲೇ ಹರಡುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಪೀಟರ್ ಕಾರ್ಡಿಂಗ್ಲೆ ತಿಳಿಸಿದ್ದರು. |