ಕಳೆದ ವರ್ಷ ಮ್ಯಾನ್ಮಾರ್‌ನ್ನು ಕಂಗೆಡಿಸಿದ್ದ 'ನರ್ಗಿಸ್' ಚಂಡಮಾರುತದ ಘಟನೆಗೆ ಇಂದಿಗೆ ಒಂದು ವರ್ಷ ಸಂದಿದ್ದು, ದೇಶಾದ್ಯಂತ ದುರಂತದ ವರ್ಷಾಚರಣೆಯನ್ನು ಆಚರಿಸಿ, ವಿಪತ್ತಿನಲ್ಲಿ ಮಡಿದವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷ ರಾಷ್ಟ್ರಾದ್ಯಂತ ನರ್ಗಿಸ್ ಚಂಡಮಾರುತದ ರುದ್ರನರ್ತನಕ್ಕೆ ಸಾವಿರಾರು ಎಕರೆ ಸಾಗುವಳಿ ನಾಶವಾಗಿದ್ದರೆ, ಸುಮಾರು 140,000 ಜನರು ಸಾವನ್ನಪ್ಪಿದ್ದರು.ನರ್ಗಿಸ್ ದುರಂತಕ್ಕೆ ಸಂಬಂಧಿಸಿದಂತೆ ಮ್ಯಾನ್ಮಾರ ಆಡಳಿತ ರೂಢ ಜುಂಟಾ ಸರ್ಕಾರ ಯಾವುದೇ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಮ್ಯಾನ್ಮಾರ ಇತಿಹಾಸದಲ್ಲಿಯೇ ಇದೊಂದು ಬೃಹತ್ ರಾಷ್ಟ್ರೀಯ ದುರಂತವಾಗಿ ಸೇರ್ಪಡೆಗೊಂಡಿದೆ. ಆದರೆ ವಿಪರ್ಯಾಸವೆಂದರೆ ಇಷ್ಟು ದೊಡ್ಡ ದುರಂತದ ಬಗ್ಗೆ ಸರ್ಕಾರ ಕೃಪಾಪೋಷಿತ ಮ್ಯಾನ್ಮಾರ್‌ನ ನ್ಯೂಲೈಟ್ ಪತ್ರಿಕೆ ಘಟನೆ ಕುರಿತು ಯಾವುದೇ ವರದಿಯನ್ನು ಪ್ರಕಟಿಸಿಲ್ಲ. 2008 ರ ಮೇ 2ರಂದು ಮಧ್ಯರಾತ್ರಿ ಏಕಾಏಕಿ ಬಂದಪ್ಪಳಿಸಿದ ನರ್ಗಿಸ್ ಚಂಡಮಾರುತದಿಂದಾಗಿ ಮ್ಯಾನ್ಮಾರ್ ಜನರು ದಿಕ್ಕೆಟ್ಟು ಹೋಗಿದ್ದರು. ದ್ವೀಪ ಪ್ರದೇಶದಲ್ಲಿ 12ಅಡಿ ಎತ್ತರಕ್ಕೆ ಎದ್ದ ರಕ್ಕಸ ಗಾತ್ರದ ಅಲೆಗಳಿಂದಾಗಿ 85ಸಾವಿರ ಜನರು ಸಾವನ್ನಪ್ಪಿದ್ದರೆ, 54ಸಾವಿರ ಮಂದಿ ನಾಪತ್ತೆಯಾಗಿದ್ದರು. ಇದರಲ್ಲಿ ಇರ್ರಾವಾಡ್ಡಿ ಡೆಲ್ಟಾ ಪ್ರದೇಶದಲ್ಲಿ ಅಧಿಕ ಸಾವು-ನೋವು ಸಂಭವಿಸಿತ್ತು. |