ದೂರದರ್ಶನಲ್ಲಿ ಕಾರ್ಯಕ್ರಮ ನೀಡಿರುವ ತಮ್ಮಸಹೋದರಿಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ 'ಅವಮಾನಿತರಾದ' ಸಹೋದರರಿಬ್ಬರು, ಆಕೆಯನ್ನು ಗುಂಡಿಕ್ಕಿ ಕೊಂದಿರುವ ಹೇಯಕೃತ್ಯ ಪಾಕಿಸ್ತಾನದ ಪೇಶಾವರದಲ್ಲಿ ಕಳೆದ ವಾರ ಸಂಭವಿಸಿದೆ ಎಂಬುದಾಗಿ ವರದಿ ತಿಳಿಸಿದೆ.
ಸುಮಾರು 30ರ ಹರೆಯದ ಐಮಾನ್ ಉದಾಸ್ ಎಂಬ ಗಾಯಕಿಯನ್ನು ಕೊಲೆಗೈದಿರುವುದು ನಗರದ ಸಾಂಸ್ಕೃತಿಕ ಸಮುದಾಯಕ್ಕೆ ಆಘಾತವನ್ನುಂಟುಮಾಡಿದೆ. ಅಲ್ಲದೆ ಈ ಘಟನೆಯು ಮಹಿಳೆಯರ ಸಾಂಸ್ಕೃತಿಕ ಸ್ವಾಂತ್ರ್ಯಕ್ಕೆ ಹಿನ್ನಡೆ ಉಂಟುಮಾಡಿದೆ ಎಂಬುದಾಗಿ ದಿ ಸಂಡೇ ಟೈಮ್ಸ್ ಭಾನುವಾರ ವರದಿ ಮಾಡಿದೆ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ತಮ್ಮ ಹಿಡಿತ ಬಿಗಿಗೊಳಿಸುತ್ತಿದ್ದಾರೆನ್ನಲಾಗಿದೆ.
ತನ್ನ ತಾಯ್ನೆಲದ ಪಾಶ್ಟೋ ಭಾಷೆಯಲ್ಲಿ ಉದಾಸ್ ಕವಿತೆಗಳನ್ನು ರಚಿಸಿ ಹಾಡಿದ್ದರು. ಅಲ್ಲದೆ ಅವರು ಸರ್ಕಾರಿ ಸ್ವಾಮ್ಯದ ಪಿಟಿವಿಯಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಪಾಶ್ಟೋ ಭಾಷೆ ವಾಯುವ್ಯ ಪ್ರಾಂತ್ಯದ ಬುಡಕಟ್ಟು ಪ್ರದೇಶದಲ್ಲಿ ಚಾಲ್ತಿಯಲ್ಲಿದೆ.
ಉದಾಸ್ ಅವರು ಜನಪ್ರಿಯತೆ ಗಳಿಸಿದ್ದರೂ, ಅವರ ಕುಟುಂಬಕ್ಕೆ ಅವರ ಈ ಕ್ರಮ ಸರಿಎನಿಸದೆ ಅವಮಾನಕಾರಿ ಎಂಬುದಾಗಿ ಪರಿಣಮಿಸಿತ್ತು. ಮಹಿಳೆಯೊಬ್ಬಳು ದೂರದರ್ಶನದಲ್ಲಿ ಕಾರ್ಯಕ್ರಮ ನೀಡುವುದು ಪಾಪಕಾರ್ಯ ಎಂದು ಅವರು ಪರಿಗಣಿಸಿದ್ದರು.
ಹಾಗಾಗಿ ಆಕೆಯ ಇಬ್ಬರು ಸಹೋದರರು, ಆಕೆಯಪತಿ ಮನೆಯಲ್ಲಿಲ್ಲದ ವೇಳೆಗೆ ಆಕೆ ವಾಸಿಸುತ್ತಿದ್ದ ಫ್ಲಾಟ್‌ಗೆ ತೆರಳಿ ಎದಗೆ ಗುಂಡಿಕ್ಕಿ ಪರಾರಿಯಾಗಿದ್ದಾರೆ. ಉದಾಸ್ ಅವರ ಎದೆಗೆ ಮೂರು ಗುಂಡುಗಳನ್ನು ಎಸೆಯಲಾಗಿದೆ.
ಇಬ್ಬರು ಮಕ್ಕಳತಾಯಿಯಾಗಿದ್ದ ವಿಚ್ಛೇದಿತೆ ಉದಾಸ್ ಸಾಯುವ 10 ದಿನಗಳಿಗೆ ಹಿಂದಷ್ಟೆ ಮರುಮದುವೆಯಾಗಿದ್ದರು.
ಉದಾಸ್ ಅವರು ನೀಡಿರುವ ಕೊನೆಯ ಕಾರ್ಯಕ್ರಮದಲ್ಲಿ ಹಾಡಿದ ಹಾಡು ಅವರ ಸಾವಿನ ಶಕುನವೇನೋ ಎಂಬಂತಿದೆ. ಅವರ ಹಾಡಿನ ಅರ್ಥ ಇಂತಿದೆ. "ನಾನು ಸತ್ತಿದ್ದರೂ ಬದುಕಿರುವವರೊಂದಿಗೆ ಬದುಕುತ್ತಿದ್ದೇನೆ, ಯಾಕೆಂದರೆ ನಾನು ನನ್ನ ಪ್ರಿಯಕರನ ಕನಸಿನಲ್ಲಿ ಬದುಕುತ್ತಿದ್ದೇನೆ" |