ನೇಪಾಳದ ಮಾವೋವಾದಿ ನೇತೃತ್ವದ ಸರ್ಕಾರವು ಸೇನಾಮುಖ್ಯಸ್ಥ ಜನರಲ್ ರುಕ್ಮಂಗ ಕಟವಾಲ್ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ತಮ್ಮ ನಿಷ್ಠಾವಂತ ಜನರಲ್ ಕುಲ್ ಬಹಾದೂರ್ ಕಾಡ್ಕ ಅವರನ್ನು ನೇಮಿಸಿದೆ.
ಪ್ರಧಾನಮಂತ್ರಿ ಪ್ರಚಂಡ ಅವರ ಪತ್ರಿಕಾ ಸಲಹೆಗಾರ ಓಂ ಶರ್ಮಾ ಅವರು ಕಟವಾಲರ ವಜಾ ಕುರಿತ ಘೋಷಣೆಯನ್ನು ಮಾಡಿದ್ದಾರೆ. ಇಂತಹ ಕ್ರಮಕ್ಕೆ ಮುಂದಾಗಬಾರದು ಎಂಬುದಾಗಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಹಾಗೂ ದೇಶಿಯ ನಾಯಕರು ಕರೆ ನೀಡಿರುವ ಹೊರತಾಗಿಯೂ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಅದಾಗ್ಯೂ, ಸೇನಾ ಮುಖ್ಯಸ್ಥರನ್ನು ವಜಾಗೊಳಿಸುವ ನಿರ್ಧಾರ ಕೈಗೊಳ್ಳಲು ಪ್ರಚಂಡ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯನ್ನು ಇತರ ನಾಲ್ಕು ಮಿತ್ರಪಕ್ಷಗಳು ಬಹಿಷ್ಕರಿಸಿದ್ದವು. ಸಿಪಿಎನ್-ಯುಎಂಎಲ್, ಮಧೇಶಿ ಪೀಪಲ್ಸ್ ರೈಟ್ಸ್ ಫೋರಮ್, ಸದ್ಭಾವನ್ ಪಕ್ಷ ಮತ್ತು ಸಿಪಿಎನ್-ಸಂಯುಕ್ತ ಪಕ್ಷಗಳು ಸಭೆಯನ್ನು ಬಹಿಷ್ಕರಿಸಿದ್ದವು.
ಆದರೆ ಈ ನಿರ್ಧಾರವನ್ನು ಅಧ್ಯಕ್ಷ ರಾಮ್ ಬರಣ್ ಯಾದವ್ ಅವರು ಅಂಗೀಕರಿಸಿದ್ದಾರೆ.
ಸೇನಾ ಮುಖ್ಯಸ್ಥರ ವಜಾವನ್ನು ಪ್ರಮುಖ ವಿರೋಧಿ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಮತ್ತು ಇತರ 16 ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು.
ಸೇನೆಯು ಮಾಡಿರುವ ನೇಮಕಾತಿ ಮತ್ತು ಸರ್ಕಾರವು ನಿವೃತ್ತಿ ನೀಡಿದ್ದ ಎಂಟು ಮಂದಿ ಜನರಲ್‌ಗಳ ಮರು ನೇಮಕಾತಿಗೆ ತೋರಿರುವ ತರಾತುರಿ ಮತ್ತು ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸದಿರುವ ಅದರ ನಿರ್ಧಾರಕ್ಕೆ ಸ್ಪಷ್ಟನೆ ಕೋರಿ 15 ದಿನಗಳ ಗಡುವು ನೀಡಿರುವ 15 ದಿನಗಳ ಬಳಿಕ ನೇಪಾಳಿ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.
ಇದಕ್ಕೆ ಉತ್ತರ ನೀಡಿರುವ ಕಟವಾಲ್ ತಾನು ಸರ್ಕಾರಿ ನಿರ್ದೇಶನಗಳಿಗೆ ಅವಿಧೇಯತೆ ತೋರಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪ್ರಧಾನಿಯವರಿಗೆ ತನ್ನನ್ನು ವಜಾಗೊಳಿಸುವ ಅಧಿಕಾರವಿಲ್ಲ ಎಂದು ಅವರು ತನ್ನನ್ನು ವಜಾಮಾಡಿರುವ ಕ್ರಮಕ್ಕೆ ಪ್ರತಿಕ್ರಿಯಿಸಿದ್ದಾರೆ. |