ತಾಲಿಬಾನ್ ವಿರುದ್ಧ ಪಾಕ್ ಮಿಲಿಟರಿ ಸಮರ ಸಾರಿದ್ದು, ಮತ್ತೊಂದೆಡೆ ನಾರ್ಥ್ ಫ್ರಂಟಿಯರ್ ಪ್ರೊವಿನ್ಸ್‌ನ ಬುನೇರ್ ಪ್ರಾಂತ್ಯದಲ್ಲಿ ತಾಲಿಬಾನ್ ಎರಡು ಸಾವಿರ ಜನರನ್ನು ತನ್ನ ವಶದಲ್ಲಿಟ್ಟುಕೊಂಡಿದೆ.
ಬುನೇರ್, ಡಿರ್ ಹಾಗೂ ಸ್ವಾತ್ ಕಣಿವೆ ಪ್ರದೇಶದಲ್ಲಿ ಪಾಕ್ ಮಿಲಿಟರಿ ತಾಲಿಬಾನ್ ಉಗ್ರರ ವಿರುದ್ಧ ಸಮರ ಮುಂದುವರಿಸಿರುವ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರರು ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಉಗ್ರರ ವಿರುದ್ದದ ಹಣಾಹಣಿಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಉಗ್ರರು ಸಾವನ್ನಪ್ಪಿರುವುದಾಗಿ ಮಿಲಿಟರಿ ಮೂಲಗಳು ತಿಳಿಸಿವೆ.
ತಾಲಿಬಾನ್ ಬುನೇರ್ ಜಿಲ್ಲೆಯ ಎರಡು ಸಾವಿರ ಜನರನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿರುವುದಾಗಿ ಬ್ರಿಟನ್ ದಿನಪತ್ರಿಕೆಯೊಂದರ ವರದಿ ತಿಳಿಸಿದೆ. ಶಸ್ತ್ರ ಸಜ್ಜಿತ ತಾಲಿಬಾನ್ ಉಗ್ರರು ಗ್ರಾಮಸ್ಥರನ್ನು ಅಪಹರಿಸಿಕೊಂಡು ಹೋಗಿದ್ದು, ಅವರ ಬಿಡುಗಡೆಗಾಗಿ ಬೃಹತ್ ಮೊತ್ತದ ಹಣದ ಬೇಡಿಕೆ ಇಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿರುವುದಾಗಿ ವರದಿ ಹೇಳಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಸ್ವಾಗತಿಸಿರುವ ಗ್ರಾಮಸ್ಥರು, ಈಗಾಗಲೇ ಸುಮಾರು 90ಸಾವಿರ ನಿರಾಶ್ರಿತರು ಪ್ರಾಂತ್ಯವನ್ನು ತೊರೆದಿರುವುದಾಗಿ ವರದಿ ತಿಳಿಸಿದೆ. |